ವಿಶ್ವ ಭಗವದ್ಗೀತಾ ಸ್ಪರ್ಧೆಯ ಫಲಿತಾಂಶ ಪ್ರಕಟ...

ವಿಶ್ವಗೀತಾ, ಪರೀಕ್ಷೆ, ಸ್ಪರ್ಧೆ, ಫಲಿತಾಂಶ, ಪುತ್ತಿಗೆ ಮಠ, ಪರ್ಯಾಯ, ಉಡುಪಿ, ಸುಗುಣೇಂದ್ರ ತೀರ್ಥ ಶ್ರೀಪಾದರು, The Vishwa Gita,  Competition, Results, Announced, Putthige Mutt, Exam, Paryaya, Udupi, Sugunendra Teertha Shripadharu, 
Published on

ಪರ್ಯಾಯ ಪುತ್ತಿಗೆ ಮಠದಿಂದ ಆಯೋಜನೆ

ವಿನಯಕುಮಾರ್​, ಪಯೋಜ್ ಕೆ. ಪ್ರಥಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಪರ್ಯಾಯ ಪುತ್ತಿಗೆ ಮಠದಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಮಟ್ಟದ ಭಗವದ್ಗೀತಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ವಿಶ್ವಾದ್ಯಂತ 2 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದು, ಹಿರಿಯರ ವಿಭಾಗದಲ್ಲಿ ಮಂಗಳೂರು ಸುರತ್ಕಲ್​ನ ವಿನಯಕುಮಾರ್​ ಹಾಗೂ ಕಿರಿಯರ ವಿಭಾಗದಲ್ಲಿ ಬೆಂಗಳೂರಿನ ಪಯೋಜ್ ಕಂಬಳೂರು ಪ್ರಥಮ ಸ್ಥಾನ ಗಳಿಸಿದ್ದು, ತಲಾ 1 ಲಕ್ಷ ರೂ. ಬಹುಮಾನ ಗಳಿಸಿದ್ದಾರೆ.

S-1
ವಿನಯಕುಮಾರ್
S-2
ಸುಮಿತ್ 
S-3
ಅನಿಲಕುಮಾರ್
S-4
ಸೌಮ್ಯಾ ಸಿ.ಎಸ್
.
S-4(1)
ಲಕ್ಷ್ಮೀ ಸತೀಶ್

ಹಿರಿಯ ವಿಭಾಗದಲ್ಲಿ ಚನ್ನಪಟ್ಟಣದ ಸುಮಿತ್​ ಪ್ರಲ್ಹಾದ್​ (ದ್ವಿ), ಚಿಕ್ಕಬಳ್ಳಾಪುರದ ಅನಿಲಕುಮಾರ್​ ಚಿಂತಾಮಣಿ (ತೃ), ಮಂಗಳೂರಿನ ಸೌಮ್ಯಾ ಸಿ.ಎಸ್​. ಹಾಗೂ ಬೆಂಗಳೂರಿನ ಲಕ್ಷ್ಮೀ ಸತೀಶ್​ ಚತುರ್ಥ ಬಹುಮಾನ ಗಳಿಸಿದ್ದಾರೆ.

J-1
ಪಯೋಜ್
J-2
ಮಯಾಂಕ್
J-3
ಅವಾ ತಮಂಗ್
J-4
ಶ್ರೀಪಾಲ್

ಕಿರಿಯ ವಿಭಾಗದಲ್ಲಿ ಬೆಂಗಳೂರಿನ ಮಯಾಂಕ್​ ಭಟ್​ (ದ್ವಿ), ಪಶ್ಚಿಮ ಬಂಗಾಳದ ಅವಾ ತಮಂಗ್​ (ತೃ), ಮಂಗಳೂರಿನ ಶ್ರೀಪಾಲ್​ ಹೊಸಬೆಟ್ಟು ಚತುರ್ಥ ಬಹುಮಾನ ಗಳಿಸಿದ್ದಾರೆ. ತನ್ಮೂಲಕ ಭಗವದ್ಗೀತೆಯಲ್ಲಿ ತಾವು ಹೊಂದಿರುವ ಪ್ರೌಢಿಮೆಯನ್ನು ಮೆರೆದಿದ್ದು, ವಿಶ್ವದ ಗಮನ ಸೆಳೆದಿದ್ದಾರೆ.

ಪುತ್ತಿಗೆ ಶ್ರೀಗಳ ಗೀತಾ ಪರ್ಯಾಯ

ಉಡುಪಿ ಶ್ರೀಕೃಷ್ಣ ಮಠದ ಚತುರ್ಥ ಪರ್ಯಾಯ ಕೈಗೊಂಡಿರುವ ಪುತ್ತಿಗೆ ಸುಗುಣೇಂದ್ರ ಶ್ರೀಗಳು, ಗೀತಾ ಪರ್ಯಾಯ ಎಂಬುದಾಗಿಯೇ ಆಚರಿಸುತ್ತಿದ್ದಾರೆ. ಎರಡು ವರ್ಷಗಳ ಕಾಲ ಒದಗಿರುವ ಶ್ರೀಕೃಷ್ಣನ ಸೇವಾ ಕೈಂಕರ್ಯದ ಸಂದರ್ಭವನ್ನು ಕೋಟಿ ಗೀತಾ ಲೇಖನ ಯಜ್ಞಕ್ಕೆ ಮೀಸಲಿಟ್ಟಿದ್ದಾರೆ. ಅದರ ಭಾಗವಾಗಿ ಭಗವದ್ಗೀತೆಗೆ ಸಂಬಂಧಿಸಿ ಅನೇಕ ಕಾರ್ಯಕ್ರಮ ಆಯೋಜಿಸಿದ್ದು, ಅದರಲ್ಲಿ ವಿಶ್ವ ಗೀತಾ ಸ್ಪರ್ಧೆಯೂ ಪ್ರಮುಖವಾಗಿದೆ.

ಫೆ.21ರಂದು ಬಹುಮಾನ ವಿತರಣೆ

ರಾಜಾಂಗಣದಲ್ಲಿ ಬಹುಮಾನ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಫೆ.21ರಂದು ಸುಗುಣೇಂದ್ರ ಶ್ರೀಗಳು ವಿಜೇತರಿಗೆ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಲಿದ್ದಾರೆ. ಪ್ರಥಮ 1 ಲಕ್ಷ ರೂ., ದ್ವಿತೀಯ 75 ಸಾವಿರ ರೂ., ತೃತೀಯ 50 ಸಾವಿರ ರೂ. ಹಾಗೂ ಚತುರ್ಥ 25 ಸಾವಿರ ರೂ. ಬಹುಮಾನ ನೀಡಲಾಗುತ್ತಿದೆ ಎಂದು ಪುತ್ತಿಗೆ ಮಠ ಪ್ರಕಟಣೆಯಲ್ಲಿ ತಿಳಿಸಿದೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ಪರೀಕ್ಷೆ

ವಿಶ್ವ ಗೀತಾ ಸ್ಪರ್ಧೆಯಲ್ಲಿ ಮೂರು ಹಂತದ ಪರೀಕ್ಷೆ ಆಯೋಜಿಸಲಾಗಿತ್ತು. ಕ್ಲಿಷ್ಟಕರವಾಗಿದ್ದ ಎರಡು ಹಂತಗಳನ್ನು ದಾಟಿ, ಮೂರನೇ ಹಂತಕ್ಕೆ ಮೂವತ್ತು ಜನರು ಆಯ್ಕೆಯಾದರು. ಆಯ್ದ ಸ್ಪರ್ಧಾಳುಗಳನ್ನು ವೀಡಿಯೊ ಕಾನ್ಫರೆನ್ಸ್​ ಮೂಲಕ ವಿದ್ವಾಂಸರು ಪರೀಕ್ಷೆ ಮಾಡಿದರು. ಸುಗುಣೆಂದ್ರ ಶ್ರೀ ಹಾಗೂ ಕಿರಿಯರಾದ ಸುಶ್ರೀಂದ್ರ ಶ್ರೀಗಳೂ ಸಹ ವೀಡಿಯೊ ಸಂವಾದದ ಮೂಲಕ ಮಾತನಾಡಿ, ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರು ಘೋಷಿಸಿ ಆಶೀರ್ವದಿಸಿದರು. ಅಮೆರಿಕದಿಂದ ವಿದ್ವಾಂಸ ಕೇಶವ ತಾಡಪತ್ರಿ, ಉಡುಪಿಯಿಂದ ವಿದ್ವಾನ್​ ಗೋಪಾಲ್​ ಆಚಾರ್ಯ, ವಿದ್ವಾನ್​ ಪ್ರಸನ್ನ ಆಚಾರ್ಯ, ವಿದ್ವಾನ್​ ಡಾ. ಷಣ್ಮುಖ ಹೆಬ್ಬಾರ್​ ಪರೀಕ್ಷೆ ನಡೆಸಿದರು. ತಾಂತ್ರಿಕ ತಂಡದಲ್ಲಿ ಪ್ರಮೋದ್​ ಸಾಗರ್​, ಚೊಕ್ಕಾಡಿ ವಾದಿರಾಜ್​ ಭಟ್​, ರಾಮಪ್ರಿಯ, ಡಾ. ಸುದರ್ಶನ್​ ಇತರರು ಸಹಕರಿಸಿದರು.

ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಹಾಗೂ ಗ್ರಂಥ ಓದುವಿಕೆಯಲ್ಲಿ ಯುವ ಸಮುದಾಯ ನಿರಾಸಕ್ತರಾಗುತ್ತಿದ್ದಾರೆ. ಅವರನ್ನು ಮತ್ತೆ ಅಧ್ಯಾತ್ಮದತ್ತ ಆಕರ್ಷಿಸಲು ಹಾಗೂ ಭಗವದ್ಗೀತೆಯ ಪಠಣದ ಮೂಲಕ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ವಿಶ್ವಮಟ್ಟದಲ್ಲಿ ಗೀತಾ ಸ್ಪರ್ಧೆ ಆಯೋಜಿಸಲಾಗಿತ್ತು. ಗೀತಾಚಾರ್ಯನಾದ ಶ್ರೀಕೃಷ್ಣನ ಗೀತೆಯ ಆಶಯದಂತೆ ಎಲ್ಲರೂ ಜೀವಿಸಿದರೆ ವಿಶ್ವಕ್ಕೆ ಒಳಿತಾಗಲಿದೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net