

ಮಧುಗಿರಿ: ಕಿತ್ತೂರು ರಾಣಿ ಚನ್ನಮ್ಮಕನ್ನಡ ನಾಡಿನ ವೀರ ವನಿತೆ. ಶೌರ್ಯ ಮತ್ತು ಸ್ವಾಭಿಮಾನದ ಪ್ರತಿಕ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ತಿಳಿಸಿದರು.
ಪಟ್ಟಣದ ಟಿವಿವಿ ಕಾಲೇಜಿನ ಸಹೃದಯ ಬಳಗದಿಂದ ಗುರುವಾರ ಆಯೋಜಿಸಿದ್ದ ಚನ್ನಮ್ಮ ಜಯಂತಿಯಲ್ಲಿ ಮಾತನಾಡಿ, ಆಕೆಯ ಸಾಹಸ, ರಾಜನೀತಿ, ನಿಪುಣತೆ. ಬುದ್ಧಿಶಕ್ತಿ, ಆಳವಾದ ಪರಿಜ್ಞಾನ, ದೇಶಪ್ರೇಮ ಭಕ್ತಿಗಳ ಸದ್ಗುಣಿಯಾಗಿದ್ದಳು. ಕಿತ್ತೂರು ಸ್ವಾತಂತ್ರ್ಯ ಗಳಿಸಲು ಶ್ರಮಿಸಿದಳು. ಬಂಧನದಲ್ಲಿದ್ದ ಸ್ತ್ರೀಯರನ್ನೂ, ಮಕ್ಕಳನ್ನೂ ಬಿಡುಗಡೆ ಮಾಡಿ ಮಾನವೀಯತೆಯನ್ನು ಮೆರೆದಿದ್ದಳು ಎಂದರು.
ಗ್ರಂಥಪಾಲಕ ಜಿ.ಎಸ್.ನಾಗಭೂಷಣ ಮಾತನಾಡಿ, ರಾಣಿ ಚನ್ನಮ್ಮ ಆಡಳಿತ ನಡೆಸುತ್ತಿದ್ದಾಗ ಆಕೆಯನ್ನು ಗದ್ದುಗೆಯಿಂದ ಕೆಳಗಿಳಿಸಲು ಕೆಲವರು ಹಲವು ರೀತಿಯ ಸಂಚು ನಡೆಸಿದರು. ಆಕೆಯ ದತ್ತು ಪುತ್ರನ ಬಗ್ಗೆ ತಕರಾರು ಎತ್ತಿ ಅವಾಂತರಗಳನ್ನು ಮಾಡಿದರಾದರೂ ಆಕೆ ಎದೆಗುಂದದೆ ಹೋರಾಡಿ ವೀರನಾರಿ ಎನಿಸಿಕೊಂಡಳು ಎಂದು ತಿಳಿಸಿದರು.