ಪಟ್ಟು ಸಡಿಲಿಸದ ಜಿಗಳೂರು ಗ್ರಾಮಸ್ಥರು

11 RON 1
Published on

ರೋಣ: ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ತಾಲೂಕಿನ ಜಿಗಳೂರ ಗ್ರಾಮಸ್ಥರ ಜೊತೆ ಶುಕ್ರವಾರ ಅಧಿಕಾರಿಗಳು ಮಾತುಕತೆ ನಡೆಸಿದರು. ಅಧಿಕಾರಿಗಳು ಮನವೊಲಿಸಿದರೂ ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ.

ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಪಂ ಉಪ ಕಾರ್ಯದರ್ಶಿ ಬಿ. ಕಲ್ಲೇಶ, ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ರೋಣ ತಾಪಂ ಇಒ ಶಿವಾನಂದ ಕಲ್ಮನಿ ಸೇರಿ ಹಲವರು ಜಿಗಳೂರ ಗ್ರಾಮದ ಸಮುದಾಯ ಭವನದಲ್ಲಿ ಸೇರಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.

ಪಂಚಾಯಿತಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಮತದಾನ ಬಹಿಷ್ಕ್ಕಾರದಿಂದ ಅದು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಜಿಪಂ ಉಪ ಕಾರ್ಯದರ್ಶಿ ಬಿ. ಕಲ್ಲೇಶ ಗ್ರಾಮಸ್ಥರಲ್ಲಿ ಕೈ ಮುಗಿದು ಬೇಡಿಕೊಂಡರು.

ಅಧಿಕಾರಿಗಳ ಮಾತಿಗೆ ಗ್ರಾಮಸ್ಥರು ಒಪ್ಪಲಿಲ್ಲ. ‘ಮೊದಲು ನಮ್ಮ ಸಮಸ್ಯೆ ಬಗೆಹರಿಸಿ ಆಮೇಲೆ ಮಾತುಕತೆ ಮಾಡಿ. ಸಮಸ್ಯೆಯ ಗಂಭೀರತೆಯನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ನಮ್ಮ ಬದುಕೇ ನಾಶವಾಗುತ್ತಿರುವ ಹೊತ್ತಿನಲ್ಲಿ ಸಂಧಾನ ಸಭೆಗಳೇಕೆ? ಕಳೆದ ಐದು ವರ್ಷಗಳಿಂದ ನಮ್ಮದಲ್ಲದ ತಪ್ಪಿಗೆ ವನವಾಸ ಅನುಭವಿಸಿದ್ದೇವೆ. ಪಂಚಾಯಿತಿಯಿಂದಲೇ ನಮ್ಮ ಬದುಕು ನಡೆಯುತ್ತದೆ ಎಂದು ಯರಾದರೂ ತಿಳಿದಿದ್ದರೇ ಅದು ತಪ್ಪು. ಪಂಚಾಯಿತಿಯ ಯಾವುದೇ ಸೌಲಭ್ಯಗಳನ್ನು ಪಡೆಯದೆ, ಐದು ವರ್ಷ ಕಾಲ ಜೀವನ ನಡೆಸಿದ ಅನುಭವ ನಮಗಿದೆ. ಯಾವೊಬ್ಬ ಅಧಿಕಾರಿಯೂ ನಮ್ಮ ಗ್ರಾಮಕ್ಕೆ ಸುಳಿಯಲಿಲ್ಲ. ಈಗ ಚುನಾವಣೆಯ ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದಂತೆ ತಾ ಮುಂದೆ, ನಾ ಮುಂದೆ ಎಂದು ಅಧಿಕಾರಿಗಳು ಬರುತ್ತಿದ್ದಾರೆ. ಯಾರೇ ಬಂದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ ಗ್ರಾಪಂ ಕಾರ್ಯಾಲಯ ನಿರ್ವಣವಾಗುವವರೆಗೆ ನಾವು ಚುನಾವಣೆ ಮಾಡುವುದಿಲ್ಲ’ ಎಂಬ ಒಮ್ಮತಯದ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಜಿಗಳೂರ ಗ್ರಾಮಸ್ಥರು ತಿಳಿಸಿದರು.

ಈ ಹಿಂದೆ ರೋಣ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ತಾಪಂ ಇಒ ಸಂತೋಷ ಪಾಟೀಲ ಜಿಗಳೂರ ಗ್ರಾಮಕ್ಕೆ ಬಂದು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಸಾದ್ಯವಾಗಿರಲಿಲ್ಲ. ಸಭೆಯಲ್ಲಿ ಗ್ರಾಮದ ಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net