ಗ್ರಾಪಂ ಸದಸ್ಯರ ಒಗ್ಗಟ್ಟಿದ್ದರೆ ಊರಿನ ಅಭಿವೃದ್ಧಿ

04 lxr 2
Published on

ಲಕ್ಷ್ಮೇಶ್ವರ: ಅತೀ ಕಡಿಮೆ ಅವಧಿಯಲ್ಲಿ ದೊಡ್ಡೂರು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಉತ್ತಮ ಕಟ್ಟಡ ನಿರ್ಮಿಸಿರುವುದು ದೊಡ್ಡ ಸಾಧನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಮಂಗಳವಾರ ಗ್ರಾಪಂ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಊರಿನ ಅಭಿವೃದ್ಧಿ ಆಗಬೇಕಾದರೆ ಗ್ರಾಪಂ ಆಡಳಿತ ಮಂಡಳಿಯಲ್ಲಿ ಒಮ್ಮತ ಇರಬೇಕು. ಅದು ದೊಡ್ಡೂರು ಪಂಚಾಯಿತಿಯಲ್ಲಿದೆ. ಕಟ್ಟಡದ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದೇನೆ. ಉತ್ತಮ ಕೆಲಸ ಎಲ್ಲ ನಡೆಯುತ್ತವೆಯೋ ಅಲ್ಲಿ ಗ್ರಾಮಸ್ಥರ ಸಹಾಯ, ಸಹಕಾರ ಇದ್ದೇ ಇರುತ್ತದೆ ಎಂದು ತಿಳಿಸಿದರು.

ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ಧರ್ಮದಲ್ಲಿ ರಾಜಕಾರಣ ಬರಬಾರದು. ದೊಡ್ಡೂರು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಸದಸ್ಯರು ಸರ್ಕಾರದ ಅನುದಾನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಟ್ಟಡ ನಿರ್ಮಿಸಿಕೊಂಡಿದ್ದು ಶ್ಲಾಘನೀಯ ಎಂದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾತಿಗಳ ಮಹಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರ ಪಾತ್ರ ದೊಡ್ಡದು ಎಂದರು. ತಾಪಂ ಇಒ ಕೃಷ್ಣಪ್ಪ ಧರ್ಮರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಈಳಿಗೇರ, ಮಾಜಿ ಶಾಸಕ ರಾಮಣ್ಣ ಲಮಾಣಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ನಾಗರಾಜ ಮಡಿವಾಳರ, ಅಮರಪ್ಪ ಗುಡಗುಂಟಿ, ಸುನೀಲ ಮಹಾಂತಶೆಟ್ಟರ, ದೇವಣ್ಣ ತೋಟದ, ಸಂಜೀವಗೌಡ ಪಾಟೀಲ ಮಾತನಾಡಿದರು. ಉಪಾಧ್ಯಕ್ಷೆ ಸುಶೀಲಾ ಶಿವಪುತ್ರಪ್ಪ ಲಮಾಣಿ, ಜಿಪಂ ಎಇಇ ಮಲ್ಲಿಕಾರ್ಜುನ ಪಾಟೀಲ, ಪಿಡಿಒ ರಿಯಾಜ್ ಕೆ.ಕೆ., ಕಾರ್ಯದರ್ಶಿ ರಾಮಯ್ಯ ಗುರುವಿನ, ಎಸ್.ಪಿ. ಬಳಿಗಾರ, ಎಂ.ಎಸ್. ದೊಡ್ಡಗೌಡ್ರ, ಫಕ್ಕೀರೇಶ ಮ್ಯಾಟಣ್ಣವರ, ಜಗದೀಶ ಹುಲಿಗೆಮ್ಮನವರ, ಗುತ್ತಿಗೆದಾರ ದುದ್ದುಸಾಬ್ ಗೋನಾಳ, ಮಲ್ಲೇಶ ಮಣ್ಣಮ್ಮನವರ, ಕೃಷ್ಣ ಲಮಾಣಿ ಮತ್ತಿತರರು ಇದ್ದರು. ನೀಲಪ್ಪ ಹಡಪದ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net