

ಮದ್ದೂರು: ನರೇಗಾ ಯೋಜನೆಯಡಿ ಉದ್ಯೋಗ ನೀಡದೇ ನಿರ್ಲಕ್ಷೃ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆಯೋಪಿಸಿ ಕೂಲಿ ಕಾರ್ಮಿಕರು ತಾಲೂಕಿನ ನಿಲುವಾಗಿಲು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾ.ಪಂ. ಕಚೇರಿ ಬಳಿ ಆಗಮಿಸಿದ ಕೂಲಿ ಕಾರ್ಮಿಕರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ನರೇಗಾ ಯೋಜನೆಯಡಿ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ ಎಂದರು.
ಜಾಬ್‌ಕಾರ್ಡ್ ಪಡೆದಿರುವ ಮಹಿಳಾ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿಲ್ಲ. ಈ ಸಂಬಂದ ಪಿಡಿಒಗೆ ಮನವಿ ಸಲ್ಲಿಸಿದ್ದರೂ ಕ್ರಮ ವಹಿಸದೆ ಸಬೂಬು ಹೇಳಿ ದಿನ ದೂಡಲಾಗುತ್ತಿದೆ. ಅರ್ಜಿ ಸಲ್ಲಿಸಿ 4 ತಿಂಗಳುಗಳು ಕಳೆದರೂ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡದ ಹಿನ್ನೆಲೆಯಲ್ಲಿ ಬದುಕು ಸಾಗಿಸುವುದು ಮತ್ತು ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಕೈಗೊಂಡಿದ್ದು ನಿಲುವಾಗಿಲು ಗ್ರಾಮದಲ್ಲಿ ಯಾವುದೇ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮದಲ್ಲಿ ಕಾಲುವೆ, ರಸ್ತೆ, ಜಂಗಲ್ ಕಟಿಂಗ್, ಹೂಳೆತ್ತುವುದು ಸೇರಿದಂತೆ ಇತರ ಕಾಮಗಾರಿಗಳಿದ್ದರೂ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಯಾವುದೇ ಕಾಮಗಾರಿಗೆ ಅನುಮತಿ ನೀಡುತ್ತಿಲ್ಲ. ಕೂಲಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ನಮ್ಮಂತಹ ನೂರಾರು ಕುಟುಂಬಕ್ಕೆ ತೊಂದರೆ ಉಂಟಾಗಿದೆ ಎಂದರು.
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪಿಡಿಒ ರವಿಕುಮಾರ್, ಈಗಾಗಲೇ ಆಡಳಿತ ಮಂಡಳಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಬಳಿಕ ಕಚೇರಿ ಬೀಗ ತೆಗೆದು ಪ್ರತಿಭಟನೆ ಅಂತ್ಯಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಪ್ರಮೀಳಾ, ಗೌರಮ್ಮ, ಪುಷ್ಪಾ, ಜಯಮ್ಮ, ಲಕ್ಷ್ಮಮ್ಮ, ಬಾನು, ಪ್ರಿಯಾ, ಭಾಗ್ಯಮ್ಮ ಇತರರಿದ್ದರು.