ಅರ್ಚಕರ ಗ್ರಾಮ ಈಗ ಗಣಗೂರು

Vieagallu
ಮಾಸ್ತಿಗಲ್ಲು, ವೀರಗಲ್ಲು
Published on

ಶನಿವಾರಸಂತೆ: ಗಾಣಂಗಳ (ಅರ್ಚಕರ) ಗ್ರಾಮ ಈಗ ಗಣಗೂರು ಆಗಿ ಮಾರ್ಪಟ್ಟಿದ್ದು, ಈ ಹಿಂದೆ ಗ್ರಾಮದಲ್ಲಿ ಚೋಳರು ನೆಲೆಸಿದ್ದರು ಎಂಬುದಕ್ಕೆ ಗ್ರಾಮದ ಅಲ್ಲಲ್ಲಿ ಮಾಸ್ತಿಗಲ್ಲು, ವೀರಗಲ್ಲುಗಳೇ ಸಾಕ್ಷಿ.

ಈ ಹಿಂದೆ ಗಾಣಂಗಳ ಗ್ರಾಮದಲ್ಲಿ ಅರ್ಚಕರು ಹೆಚ್ಚಾಗಿ ನೆಲೆಸಿದ್ದರು. ಅಲ್ಲದೆ ಎಲ್ಲ ಸಮುದಾಯಕ್ಕೂ ಆಯಾ ಜನಾಂಗಕ್ಕೆ ಸೇರಿದ ಅರ್ಚಕರು ನೆಲೆಸಿದ್ದರು. ಹಾಗಾಗಿ ಅರ್ಚಕರ ಗ್ರಾಮ ಎಂದು ನಾಮಕರಣ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಹಾಡು ಭಾಷೆಯಂತೆ ಗಣಗೂರು ಎಂದು ಮರುನಾಮಕರಣ ಮಾಡಲಾಯಿತು ಎಂಬುದು ಗ್ರಾಮಸ್ಥರ ಅನಿಸಿಕೆ. ಗ್ರಾಮದಲ್ಲಿರುವ ಮಾಸ್ತಿಗಲ್ಲು, ವೀರಗಲ್ಲುಗಳನ್ನು ಪುರತತ್ವ ಇಲಾಖೆ ನಶಿಸಿ ಹೋಗದಂತೆ ಕಾಪಾಡಬೇಕು. ಅದಕ್ಕಾಗಿ ಸರ್ಕಾರ ಈ ಗ್ರಾಮಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕಿದೆ. ಕೃಷಿ ಪ್ರಧಾನ ಗ್ರಾಮವಾಗಿರುವುದರಿಂದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕಿದೆ.

ಗಣಗೂರು ಹೋಬಳಿ ಕೇಂದ್ರವಾಗಲು ಎಲ್ಲ ಅರ್ಹತೆಗಳಿದ್ದರೂ ಎಲ್ಲದರಿಂದ ವಂಚಿತವಾಗಿದೆ ಎಂದರೆ ತಪ್ಪಾಗಲಾರದು. ಅನೇಕ ವರ್ಷಗಳ ಹಿಂದೆ ರೈತ ಸಂಪರ್ಕ ಕೇಂದ್ರ, ಮಂಡಲ ಪಂಚಾಯಿತಿ, ಪಂಚಾಯಿತಿ ಅಧಿಕಾರಿಗಳಿಗೆ ವಸತಿ ಗೃಹ, ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಸ್ಥಾಪನೆ ಮಾಡಲಾಯಿತು. ಆದರೆ ಈ ಎಲ್ಲ ಕಚೇರಿಗಳನ್ನು ಪಕ್ಕದ ಗೋಣಿಮಾರೂರು ಗ್ರಾಮಕ್ಕೆ ವರ್ಗಾವಣೆ ಮಾಡುವ ಮೂಲಕ ಗ್ರಾಮವನ್ನು ನಿರ್ಲಕ್ಷೃ ಮಾಡಲಾಯಿತು. ಇಂದಿಗೂ ಗೋಣಿಮಾರೂರು ಗ್ರಾಮದಲ್ಲಿ ಪಂಚಾಯತಿ ಕಟ್ಟಡ ಇದ್ದರೂ ಹೆಸರು ಗಣಗೂರು ಎಂದಿದೆ. ಗಣಗೂರು ಗ್ರಾಮ ಮುಖ್ಯ ರಸ್ತೆಯಿಂದ ಒಳಭಾಗದಲ್ಲಿರುವುದರಿಂದ ಸರ್ಕಾರಿ ಕಚೇರಿಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಗೋಣಿಮಾರೂರು ಮುಖ್ಯ ರಸ್ತೆಯ ಬದಿಗೆ ಸರ್ಕಾರಿ ಕಚೇರಿಗಳನ್ನು ವರ್ಗವಣೆ ಮಾಡಲಾಯಿತು.

ಸುಮಾರು 75 ವರ್ಷ ಪೂರೈಸಿರುವ ಸರ್ಕಾರಿ ಶಾಲೆ ಇಂದಿಗೂ ಗಣಗೂರು ಗ್ರಾಮದಲ್ಲಿದೆ. ಅಂಚೆ ಕಚೇರಿಯಿದ್ದರೂ, ಈ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲ. ಅನೇಕ ವರ್ಷಗಳ ಹಿಂದೆ ಒಂದೆರೆಡು ಖಾಸಗಿ ಬಸ್‌ಗಳು ಸಂಚರಿಸುತ್ತಿತ್ತು. ಆದರೆ ಇತ್ತೀಚೆಗೆ ಸ್ಥಗಿತಗೊಂಡಿರು ವುದರಿಂದ ಪಟ್ಟಣಕ್ಕೆ ತೆರಳ ಬೇಕಾದರೆ ಗೋಣಿಮಾರೂರು ಗ್ರಾಮಕ್ಕೆ ಒಂದು ಕಿ.ಮೀ ಬರಬೇಕಾಗಿದೆ. ಇನ್ನು ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ ಗ್ರಾಮದಲ್ಲಿದ್ದು, ಪ್ರೌಢಶಾಲೆಗೆ ಗೋಣಿಮಾರೂರು, ಪದವಿಪೂರ್ವ ಕಾಲೇಜಿಗೆ ಆಲೂರು ಸಿದ್ದಾಪುರ, ಸೋಮವಾರಪೇಟೆ, ಶನಿವಾರಸಂತೆ, ಕುಶಾಲನಗರಕ್ಕೆ ತೆರಳಬೇಕಾಗಿದೆ.

ರಾಜಕಿಯ ವ್ಯವಸ್ಥೆ: ರಾಜಕೀಯವಾಗಿ ಗ್ರಾಮದಲ್ಲಿ ಯಾರೂ ಸಹ ಬೆಳವಣಿಗೆ ಕಂಡಿಲ್ಲ. ಗ್ರಾಮ ಪಂಚಾಯಿತಿಗೆ ಮಾತ್ರ ಸೀಮಿತವಾಗಿದ್ದಾರೆ. ಈ ಗ್ರಾಮದಿಂದ ಈ ಹಿಂದೆ ಚಂದ್ರಶೇಖರ್ ಹಾಗೂ ಪ್ರಸ್ತುತ ಪ್ರೇಮಾ ಗಣಗೂರು ಪಂಚಾಯಿತಿ ಅಧ್ಯಕ್ಷರಾಗಿದ್ದನ್ನು ಬಿಟ್ಟರೆ ಕೆಲವರು ಪಂಚಾಯಿತಿ ಸದಸ್ಯರಾಗಿದ್ದಾರೆ. ಅದು ಬಿಟ್ಟರೆ ಉನ್ನತವಾಗಿ ಯಾರೂ ರಾಜಕಿಯವಾಗಿ ಬೆಳೆದಿಲ್ಲ.

ಕೃಷಿಕರೇ ಹೆಚ್ಚು: ಭತ್ತ, ಜೋಳ, ಶುಂಠಿ. ಕಾಫಿ, ಕಾಳು ಮೆಣಸು, ಸುವರ್ಣಗಡ್ಡೆ, ಹಸಿರು ಮೆಣಸು, ಸಿಹಿ ಗೆಣಸು, ಕಿತ್ತಳೆ, ಬಾಳೆ, ತೆಂಗು, ಅಡಕೆ, ಏಲಕ್ಕಿ, ಗೆಣಸು, ಮಾವು, ಬಟರ್‌ಫ್ರೂಟ್ ಇತರ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಇದರೊಂದಿಗೆ ಹೈನುಗಾರಿಕೆಯನ್ನೂ ಮಾಡಲಾಗುತ್ತದೆ. ಹಾಲಿನ ಡೇರಿ ತೆರೆಯಲು ಪ್ರಯತ್ನ ನಡೆಯಿತಾದರೂ ಅಂತಿಮವಾಗಿ ಗೋಣಿಮಾರೂರಲ್ಲಿ ತೆರೆಯಲಾಯಿತು ಎನ್ನುತ್ತಾರೆ ಗ್ರಾಮಸ್ಥರು.

ಕೃಷಿಗೆ ಹೆಚ್ಚು ಮಹತ್ವ ನೀಡಿರುವ ಗ್ರಾಮ ಎನ್ನುವುದಕ್ಕೆ ಉದಾಹರಣೆ ಎಂಬಂತೆ ಅನೇಕರು ಪದವಿ ಪೂರ್ವ ಶಿಕ್ಷಣ ಮುಗಿಸಿದ್ದರೂ ಯಾವುದೇ ಸರ್ಕಾರಿ ಅಥವಾ ಖಾಸಗಿ ಕೆಲಸಗಳಿಗೆ ತೆರಳದೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಶಿಕ್ಷಣ, ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಸೈನಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಅಂಗನವಾಡಿ ಶಿಕ್ಷಕರಾಗಿ,ಅಂಚೆ ಇಲಾಖೆಯಲ್ಲೂ ಕೆಲವರು ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ವಿದೇಶದಲ್ಲಿ ಇಂಜಿನಿಯರ್ ವೃತ್ತಿ ಮಾಡುತ್ತಿದ್ದಾರೆ.

ಸರ್ವ ಧರ್ಮೀಯರ ಬಸವೇಶ್ವರ ದೇವಾಲಯ: ಸರ್ವ ಧರ್ಮವನ್ನು ಒಗ್ಗೂಡಿಸುವ ಸಲುವಾಗಿ ನಿರ್ಮಾಣಗೊಂಡಿರುವ ಬಸವೇಶ್ವರ ದೇವಾಲಯ ಇಲ್ಲಿದೆ. ದೇವಾಲಯದ ವಾರ್ಷಿಕೋತ್ಸವದ ಸಂದರ್ಭ ಗ್ರಾಮದ ಎಲ್ಲ ಸಮುದಾಯದವರು ಎಲ್ಲ ರೀತಿಯಲ್ಲೂ ಸಹಕರಿಸುವ ಮೂಲಕ ಪಾಲ್ಗೊಳ್ಳುತ್ತಾರೆ. ಗ್ರಾಮದಲ್ಲಿ ವೀರಶೈವ-ಲಿಂಗಾಯತ, ಒಕ್ಕಲಿಗ ಗೌಡ, ಅರೆಭಾಷೆ ಗೌಡ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಲೆಯಾಳಿ ಇತರ ಸಮುದಾಯದವರು ನೆಲೆಸಿದ್ದಾರೆ.

ಗೌರಿಗಣೇಶ, ಶಿವರಾತ್ರಿ, ಯುಗಾದಿ, ದೀಪಾವಳಿ, ಅರೆಭಾಷೆ ಗೌಡ ಸಮುದಾಯದವರು ಕೈಲ್ ಮುಹೂರ್ತ, ಹುತ್ತರಿ, ಮಲೆಯಾಳಿ ಜನಾಂಗದವರು ಓಣಂ, ವಿಶು ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ಕಲ್ಲುಕೆತ್ತನೆಯ ಶಿಲ್ಪಿಗಳು ಹಾಗೂ ಕುಂಬಾರರಿದ್ದರು. ನಂತರದ ದಿನಗಳಲ್ಲಿ ಇವರೆಲ್ಲ ಬೇರೆ ಭಾಗಕ್ಕೆ ತೆರಳಿದ್ದು, ಇದೀಗ ಕುಂಬಾರ ವೃತ್ತಿ ಮಾಡುವ ಒಂದು ಕುಟುಂಬ ಬೇರೆ ಭಾಗದಿಂದ ಬಂದು ವೃತ್ತಿ ಪ್ರಾರಂಭಿಸಿದೆ.

ನಮ್ಮೂರಿನಲ್ಲಿ ರಾಜಕಿಯವಾಗಿ ಯಾರೂ ಬೆಳೆದಿಲ್ಲ. ಹಾಗಾಗಿ ಗ್ರಾಪಂಗೆ ಮಾತ್ರ ಸೀಮಿತವಾಗಿದ್ದೇವೆ. ನಾನು ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ಗ್ರಾಮವನ್ನು ಅಬಿವೃದ್ಧಿ ಪಡಿಸಿದ್ದೇನೆ. ಗ್ರಾಮ ಕಾಡಂಚಿನಲ್ಲಿರುವುದರಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ಶಾಲಾ- ಕಾಲೇಜು ಮಕ್ಕಳು ಬಸ್‌ಗಾಗಿ ಎರಡು ಕಿಮೀ ಕಾಲ್ನಡಿಗೆಯಲ್ಲೇ ಸಾಗಬೇಕು. ಹಾಗಾಗಿ ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಬೇಕು. ಹಳೆಯ ಕಾಲದ ಶಾಸನಗಳು ಈ ಗ್ರಾಮದಲ್ಲಿದ್ದು ಇದನ್ನು ಅಭಿವೃದ್ಧಿ ಪಡಿಸಲು ಕ್ರಮ ತೆಗೆದುಕೊಳ್ಳಬೇಕು.

ಚಂದ್ರಶೇಖರ್

ರೈತ ಸಂಘದ ಉಪಾಧ್ಯಕ್ಷ ಸೋಮವಾರಪೇಟೆ ತಾಲೂಕು

ಚೋಳರ ಕಾಲದ ಗ್ರಾಮ ಎನ್ನುವುದಕ್ಕೆ ಕೆಲವೊಂದು ಶಾಸನಗಳು ಗ್ರಾಮದಲ್ಲಿದೆ. ಗ್ರಾಮದಲ್ಲಿ ಕೃಷಿಕರೇ ಹೆಚ್ಚಿದ್ದು ಕೃಷಿಯನ್ನೇ ನಂಬಿ ಜೀವನ ಸಾಗಿಸುತಿದ್ದೇವೆ. ರಾಜಕಿಯವಾಗಿ ಯಾರು ಬೆಳೆದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಗ್ರಾಮಕ್ಕೆ ಹಿನ್ನಡೆಯಾಗಿದೆ. ಆದರೆ ವೈಯಕ್ತಿಕವಾಗಿ ಎಲ್ಲರೂ ಉತ್ತಮವಾಗಿದ್ದಾರೆ. ಬೆರಳೆಣಿಕೆ ಜನರು ಸರ್ಕಾರಿ ಕೆಲಸದಲ್ಲಿದ್ದರೆ, ಕೃಷಿಕರಾದರೂ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕಲ್ಪಿಸಿದ್ದಾರೆ.

ಟಿ.ಬಿ. ಚಂದ್ರಶೇಖರ್ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net