

ನರೇಗಲ್ಲ: ಮುಜರಾಯಿ ಇಲಾಖೆ ವ್ಯಾಪ್ತಿಯ ಅರ್ಚಕರ ತಸ್ತಿಕ್ ಮೊತ್ತ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಸೇವಾ ಸಿಂಧು ಪೋರ್ಟ್‌ಲ್‌ನಲ್ಲಿ ನರೇಗಲ್ಲ ಗ್ರಾಮವೇ ನಾಪತ್ತೆಯಾಗಿದ್ದು, ಗ್ರಾಮದ 10 ಜನ ಅರ್ಚಕರು ಅರ್ಜಿ ಸಲ್ಲಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧೀನದ ದೇವಾಲಯಗಳ ಅರ್ಚಕರಿಗೆ ಪಾವತಿಸುತ್ತಿರುವ ವಾರ್ಷಿಕ ತಸ್ತಿಕ್ ಮೊತ್ತ 60 ರಿಂದ 72 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ನರೇಗಲ್ಲನ ಶ್ರೀ ದತ್ತಾತ್ರೇಯ, ನಾರಾಯಣ, ನರಸಿಂಹ, ಬ್ರಹ್ಮದೇವರ, ಮಾರುತಿ, ಚಂದ್ರಮೌಳೇಶ್ವರ, ತ್ರಿಪುಕಾಂತೇಶ್ವರ, ಸೋಮೇಶ್ವರ, ಶಾಕಾಂಬರಿ, ಕೇಶವ ದೇವಸ್ಥಾನಗಳು ಹಿಂದು ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯಡಿ ಬರುತ್ತವೆ. ಈ ದೇವಸ್ಥಾನಗಳ ಅರ್ಚಕರು ತಸ್ತಿಕ್ ಮೊತ್ತಕ್ಕೆ ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ.
ಸೇವಾ ಸಿಂಧೂ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಗಜೇಂದ್ರಗಡ ತಾಲೂಕಿನ ನರೇಗಲ್ಲ ಹೋಬಳಿಯ ನರೇಗಲ್ಲ ಗ್ರಾಮದ ಅರ್ಜಿ ಸಲ್ಲಿಸಲು ಗ್ರಾಮ ಆಡಳಿತಾಧಿಕಾರಿ ವ್ಯಾಪ್ತಿ ಕಾಲಂನಲ್ಲಿ ನರೇಗಲ್ಲ ಗ್ರಾಮ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ. ಈ ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು ಎಂದು ಅರ್ಚಕರು ಒತ್ತಾಯಿಸಿದ್ದಾರೆ.
ತಸ್ತಿಕ್‌ಗಾಗಿ ಅರ್ಜಿ ಸಲ್ಲಿಸಬೇಕೆಂದರೆ ನರೇಗಲ್ಲ ಗ್ರಾಮದ ಹೆಸರು ಇಲ್ಲ. ಅದರಿಂದ ಅರ್ಜಿ ಸಲ್ಲಿಸಲು ಬರುವುದಿಲ್ಲ ಎನ್ನುತ್ತಿದ್ದಾರೆ. ಇದರಿಂದ ಅರ್ಜಿಯನ್ನು ಸಲ್ಲಿಸುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದೇವೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ಈ ಬಗ್ಗೆ ಧಾರ್ಮಿಕ ಮತ್ತು ದತ್ತಿ ಇಲಾಖೆಯವರನ್ನು ವಿಚಾರಿಸಬೇಕು ಎನ್ನುತ್ತಾರೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು. ಶ್ರೀವಲ್ಲಭ ಸದರಜೋಶಿ, ಶ್ರೀ ದತ್ತಾತ್ರೇಯ ದೇವಸ್ಥಾನದ ಅರ್ಚಕರು, ನರೇಗಲ್ಲ ತಸ್ತಿಕ್‌ಗೆ ಅರ್ಜಿ ಸಲ್ಲಿಸುವಲ್ಲಿನ ತಾಂತ್ರಿಕ ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಷಯ ನಿರ್ವಾಹಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದಷ್ಟು ಶೀಘ್ರ ಸಮಸ್ಯೆ ಪರಿಹರಿಸಲಾಗುತ್ತದೆ. ಕಿರಣಕುಮಾರ ಕುಲಕರ್ಣಿ, ತಹಸೀಲ್ದಾರ್ ಗಜೇಂದ್ರಗಡ