ಗರಗದಲ್ಲಿ ಗ್ರಾಮದೇವಿಯರ ಹೊನ್ನಾಟ ಸಂಪನ್ನ

upbr Last Honnata
Published on

ಉಪ್ಪಿನಬೆಟಗೇರಿ: ಕಳೆದ ಎಂಟು ದಿನಗಳ ಹಿಂದೆ ಆರಂಭವಾಗಿದ್ದ ಗರಗ ಗ್ರಾಮದ ದ್ಯಾಮವ್ವ- ದುರ್ಗವ್ವ ದೇವಿಯರ ಹೊನ್ನಾಟ ಭಾನುವಾರ ಸಂಪನ್ನವಾಯಿತು.

ಭಾನುವಾರ ಬೆಳಗ್ಗೆ ದೇವಿಯ ಪಾದಗಟ್ಟೆಯಿಂದ ದ್ಯಾಮವ್ವ- ದುರ್ಗವ್ವ ಮೂರ್ತಿಗಳನ್ನು ಭಕ್ತರು ಹೊತ್ತುಕೊಂಡು ಹೊನ್ನಾಟವಾಡಿದರು.

ಅಗಸನಳ್ಳಿ ಗ್ರಾಮಸ್ಥರು ಗರಗ ಗ್ರಾಮಕ್ಕೆ ಆಗಮಿಸಿ ತುರಕರ ಓಣಿಯ ಭಕ್ತರೊಂದಿಗೆ ಹೊನ್ನಾಟದಲ್ಲಿ ಪಾಲ್ಗೊಂಡು ಉಭಯ ದೇವಿಯರಿಗೆ ಉಡಿ ತುಂಬಿ ಭಕ್ತಿ ಮೆರೆದರು.

ಮೆರವಣಿಗೆಯುದ್ದಕ್ಕೂ ಡೊಳ್ಳಿನ ಮಜಲು, ನಾನಾ ಮಂಗಳ ವಾದ್ಯಗಳು ಮೆರುಗು ನೀಡಿದವು. ಭಕ್ತರು ಪರಸ್ಪರ ಭಂಡಾರ ಎರಚಿ ಸಂಭ್ರಮಿಸಿದರು. ನಂತರ ಉಭಯ ದೇವಿಯರನ್ನು ಓಣಿಗಳಲ್ಲಿ ಪ್ರತಿಷ್ಠಾಪಿಸಿ ಮಹಿಳೆಯರಿಂದ ಉಡಿ ತುಂಬಲಾಯಿತು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಂತರ ದೇವಿಯರನ್ನು ಮರಳಿ ದೇವಸ್ಥಾನಕ್ಕೆ ತೆಗೆದುಕೊಂಡು ಬರಲಾಯಿತು.

ಜಾತ್ರೆ ಅಂಗವಾಗಿ ಭಾನುವಾರ ಸಂಜೆ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನೆ, ಮಲ್ಲಪ್ಪ ಹೊಂಗಲ, ರಮೇಶ ಕುರುಬಗಟ್ಟಿ ಅವರಿಂದ ನಗೆ ಹಬ್ಬ ಕಾರ್ಯಕ್ರಮ ಜರುಗಿತು.

ಸೀಮೆ ಕಟ್ಟುವ ಕೈಂಕರ್ಯ

ಉಭಯ ದೇವಿಯರಿಗೆ ಸೋಮವಾರ ಉಡಿ ತುಂಬಲಾಗುವುದು. ನಂತರ ದೇವಿಯರನ್ನು ಗ್ರಾಮದ ಅಗಸಿ ಮೂಲಕ ಮೆರವಣಿಗೆ ಮೂಲಕ ಮಡಿವಾಳೇಶ್ವರ ಮಠಕ್ಕೆ ತರಲಾಗುವುದು. ಶ್ರೀಮಠದಲ್ಲಿ ಪೂಜೆ ನಡೆಯಲಿದೆ. ಅಲ್ಲಿಂದ ದೇವಿಯರನ್ನು ಕುಂಬಾರ ಓಣಿ, ಮಾರ್ಕೆಟ್ ರಸ್ತೆ, ಬಸ್ ನಿಲ್ದಾಣ, ಜೈನರ ಓಣಿ, ತಳವಾರ ಓಣಿ ಹಾಗೂ ಹನುಮಂತ ದೇವರ ಪಾದಗಟ್ಟಿ ಮೂಲಕ ದೇವಸ್ಥಾನ ತಲುಪಲಿದೆ. ರಾತ್ರಿ 10 ಗಂಟೆಗೆ ಉಭಯ ದೇವಿಯರಿಗೆ ಪೂಜೆ ಸಲ್ಲಿಸಿ ಸೀಮೆ ಕಟ್ಟುವ ಕಾರ್ಯಕ್ರಮ ನೆರವೇರಿಸಲಾಗವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net