ಪ್ರತಿಯೊಂದಕ್ಕೂ ಹಣ ಪಡೆವ ಗ್ರಾಮ ಆಡಳಿತಾಧಿಕಾರಿ

000000000
Published on

ಕೆಜಿಎಫ್​; ಪೌತಿ ಖಾತೆ, ವಿಧವಾ ವೇತನ, ವೃದ್ಧಾಪ್ಯ ವೇತನ, ನಿರಾೇಪಣಾ ಪತ್ರ ಸೇರಿ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ವೆಂಗಸಂದ್ರ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿಗೆ ಹಣ ಕೊಡಲೇಬೇಕು. ಇಲ್ಲವಾದಲ್ಲಿ ಯಾವ ಸೌಲಭ್ಯ ಪಡೆಯಲು ಸಾಧ್ಯವಿಲ್ಲ...

ಇದು, ತಾಲೂಕು ಆಡಳಿತ ಸೌಧದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದಾಸೇನಹಳ್ಳಿ ಗ್ರಾಮಸ್ಥರು ಶಾಸಕಿ ಎಂ.ರೂಪಕಲಾ ಬಳಿ ಅಲವತ್ತುಕೊಂಡ ಪರಿ. ಪ್ರತಿಯೊಂದಕ್ಕೂ ಜನರಿಂದ ಹಣ ಪಡೆಯುತ್ತಿರುವ ಅಧಿಕಾರಿಯನ್ನು ಕೂಡಲೇ ಬೇರೆಡೆಗೆ ವರ್ಗಾಯಿಸುವಂತೆ ಆಗ್ರಹಿಸಿದ ಜತೆಗೆ ಗ್ರಾಮ ಆಡಳಿತಾಧಿಕಾರಿ ಖಾಸಿಂ ಅಲಿ ವಿರುದ್ಧ ಲಂಚಾವತಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಪೌತಿ ವಾರಸು ಖಾತೆ ಮಾಡಲು 10 ಸಾವಿರ ರೂ., ಎನ್​ಒಸಿ ನೀಡಲು 1,500, ಸಣ್ಣ ರೈತರ ಪ್ರಮಾಣ ಪತ್ರಕ್ಕೆ 5 ಸಾವಿರ ರೂ., ಪೆನ್ಷನ್​ಗೆ ಆಧಾರ್​ ಲಿಂಕ್​ ಮಾಡಲು 500 ರೂ. ಹೀಗೆ ಪ್ರತಿಯೊಂದು ಸೇವೆಗೂ ಇಂತಿಷ್ಟು ಹಣ ಎಂದು ನಿಗದಿಪಡಿಸಿಕೊಂಡು ಸಾರ್ವಜನಿಕರನ್ನು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ದೂರಿದರು.

ಈ ವೇಳೆ ಶಾಸಕಿ ರೂಪಕಲಾ ಶಶಿಧರ್​, ಗ್ರಾಮ ಆಡಳಿತಾಧಿಕಾರಿ ಜವಾಬ್ದಾರಿ ಅರಿತುಕೊಂಡಿಲ್ಲ. ಜನರ ಕಷ್ಟಸುಖಗಳಿಗೆ ಸ್ಪಂದಿಸದೆ ಮನಬಂದಂತೆ ವರ್ತಿಸುತ್ತಾ ದುಡ್ಡಿಗೆ ಪೀಡಿಸುವುದು ಸರಿಯಲ್ಲ ಎಂದು ಖಾಸಿಂ ಅಲಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈಗಾಗಲೇ ಹಲವು ದೂರು ಕೇಳಿ ಬಂದಿದ್ದು, ಅವರನ್ನು ಇಲ್ಲಿಂದ ಬೇರೆಡೆಗೆ ವರ್ಗಾವಣೆಗೊಳಿಸಿ ಎಂದು ತಹಸೀಲ್ದಾರ್​ರಿಗೆ ರೂಪಕಲಾ ಸೂಚಿಸಿದರು.

ಪಿಂಚಣಿ ಬಂದಿಲ್ಲ, ಬಿಪಿಎಲ್​ ಕಾರ್ಡ್​ ನೀಡಿ, ಖಾತೆ ಮಾಡಿಕೊಡುತ್ತಿಲ್ಲ ಎಂಬ ದೂರುಗಳು ಹೆಚ್ಚಿಗೆ ಸಲ್ಲಿಕೆಯಾದವು. ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸಿದ ಶಾಸಕಿ, ದೂರುಗಳನ್ನು ನಿಗದಿತ ಅವಧಿಯೊಳಗೆ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಹಸೀಲ್ದಾರ್​ ನಾಗವೇಣಿ, ನಗರಸಭೆ ಅಧ್ಯೆ ಇಂದಿರಾಗಾಂಧಿ ದಯಾಶಂಕರ್​, ಶಿರಸ್ತೇದಾರ್​ ಮಂಜುನಾಥ್​, ಕಂದಾಯ ನಿರೀಕ್ಷಕ ಚಂದ್ರಮೋಹನ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಧಾಕೃಷ್ಣರೆಡ್ಡಿ ಹಾಗೂ ಇತರರು ಹಾಜರಿದ್ದರು.

ಸರ್ಕಾರ ಸಂಬಳ ನೀಡಿದರೂ ಲಂಚಕ್ಕೆ ಏಕೆ ಕೈ ಒಡ್ಡುತ್ತೀರಿ?

ಸರ್ಕಾರಿ ಸೌಲಭ್ಯಗಳನ್ನು ಬಡವರಿಗೆ ತಲುಪಿಸಲು ಹಣ ಪಡೆಯುವುದು ತಪ್ಪು. ನಿಮಗೆ ಸರ್ಕಾರ ಸಂಬಳ ನೀಡುತ್ತಿದ್ದರೂ ಲಂಚಕ್ಕೆ ಏಕೆ ಕೈ ಒಡ್ಡುತ್ತೀರಿ? ಎಂದು ಶಾಸಕಿ ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮ ವರ್ತನೆಯಿಂದ ಜನಪ್ರತಿನಿಧಿಗಳಾದ ನಮ್ಮ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂದು ಹರಿಹಾಯ್ದರು.

ಕಾಲುದಾರಿ ಒತ್ತುವರಿ ತೆರವುಗೊಳಿಸಿ

ಸಭೆಯಲ್ಲಿ ವೆಂಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸೇನಹಳ್ಳಿ ಗ್ರಾಮಸ್ಥರು ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್​ ನೇತೃತ್ವದಲ್ಲಿ ಸ.ನಂ. 150ರಿಂದ ಪ್ರಾರಂಭವಾಗಿ 151/1 ರಲ್ಲಿ ಹಾದು ಹೋಗಿರುವ ಸ.ನಂ. 169ಕ್ಕೆ ಸೇರುವ ಸರ್ಕಾರಿ ಕಾಲುದಾರಿ ಇದ್ದು, ಇದನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿಯನ್ನು ತೆರವುಗೊಳಿಸುವಂತೆ ಮತ್ತು ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿ ಇಲ್ಲದಿರುವುದರಿಂದ ದಾರಿ ಮಾಡಿಕೊಡಬೇಕಾಗಿ ಶಾಸಕಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ರೂಪಕಲಾ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net