

ಮುಳಬಾಗಿಲು: ನಗರದಲ್ಲಿ ಡಕಾಯಿತರು, ಕಳ್ಳರ ಹಾವಳಿ ಹೆಚ್ಚಾಗಿ, ಜನರು ಆತಂಕಕ್ಕೆ ಒಳಗಾಗಿರುವ ಸಮಯದಲ್ಲೇ, ಜ.27 ರಂದು ರಸ್ತೆಯಲ್ಲಿ ಓಡಾಡುತ್ತಿದ್ದ ಮಹಿಳೆಯರನ್ನು ಆಗಂತುಕರು ಹಿಂಬಾಲಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ಬಜಾರ ರಸ್ತೆಯಿಂದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ಬೈಕ್ನಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದ ಆಗಂತುಕರು ಹಿಂಬಾಲಿಸುತ್ತಿರುವುದು ಸುತ್ತಮುತ್ತಲಿನ ಮನೆಗಳ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂಬರ್ ಪ್ಲೇಟ್ ಇಲ್ಲದೆ ತಿರುಗಾಡುತ್ತಿದ್ದ ದ್ವಿಚಕ್ರ ವಾಹನವನ್ನು ಸ್ಥಳಿಯರು ಅನುಮಾನಿಸುತ್ತಿರುವುದನ್ನು ಗಮನಿಸಿದ ಕಳ್ಳರು ಎಚ್ಚೆತ್ತುಕೊಂಡು ತಕ್ಷಣ ಸಂದಿಗೊಂದಿಯಲ್ಲಿ ಸುತ್ತಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಕಳ್ಳರು ಇದ್ದಕ್ಕಿದ್ದಂತೆ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳೊಬ್ಬರು ತಿಳಿಸಿದ್ದಾರೆ.
ಮುಳಬಾಗಿಲು ನಗರ ಮತ್ತು ಹಳ್ಳಿಗಳಲ್ಲಿ ಕಳವು ಮತ್ತು ಡಕಾಯಿತಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರೇ ಮುನ್ನಚ್ಚರಿಕೆ ವಹಿಸಿ ಅಪರಿಚಿತರು, ಅನುಮಾನಾಸ್ಪದ ವ್ಯಕ್ತಿಗಳು ಕಂಡ ಕೂಡಲೇ 112 ಪೊಲೀಸ್ ಹೆಲ್ಪ್ಲೈನ್ಗೆ ಮಾಹಿತಿ ನೀಡಿ ಎಂದು ಪೊಲೀಸರು ತಿಳಿಸಿದ್ದಾರೆ.