ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ನೆಮ್ಮದಿ ಬದುಕು

The victims still haven't got a peaceful life
Published on

ಮಡಿಕೇರಿ:

೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಸೋಮವಾರಪೇಟೆ ತಾಲೂಕು ಜಂಬೂರಿನಲ್ಲೂ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ ತಮ್ಮದೆಲ್ಲವನ್ನೂ ಕಳೆದುಕೊಂಡು ನೋವಿನಲ್ಲಿ ಇರುವವರಿಗೆ ಇಲ್ಲಿಯೂ ನೆಮ್ಮದಿಯ ಬದುಕು ಸಿಕ್ಕಿಲ್ಲ. ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಿರುವ ಈ ಬಡಾವಣೆಗೆ ಫೀ. ಮಾ. ಕಾರ್ಯಪ್ಪ ಹೆಸರಿಡಲಾಗಿದ್ದು, ಮಹಾನ್ ಸೇನಾನಿಗೆ ಅಗೌರವ ಕೊಡುವ ರೀತಿಯಲ್ಲಿ ಬಡಾವಣೆಯ ನಿರ್ವಹಣೆ ಮಾಡಲಾಗುತ್ತಿದೆ. ಸ್ಥಳೀಯ ನಿವಾಸಿಗಳನ್ನು ಮೂಲಭೂತ ಸೌಕರ್ಯದಿಂದ ವಂಚಿತರನ್ನಾಗಿ ಮಾಡಲಾಗಿದ್ದು, ತಮ್ಮದಲ್ಲದ ತಪ್ಪಿಗೆ ದಿನವೂ ಕೊರಗುವಂತಾಗಿದೆ.

೨೦೧೮ರ ಆಗಸ್ಟ್ ೧೩ರ ಮಧ್ಯರಾತ್ರಿಯಿಂದ ಜಿಲ್ಲೆಯಾದ್ಯಂತ ಅಬ್ಬರಿಸಲಾರಂಭಿಸಿದ್ದ ಮಳೆ ಕೇವಲ ನಾಲ್ಕು ದಿನಗಳಲ್ಲಿ ಕೊಡಗಿನಲ್ಲಿ ದೊಡ್ಡಮಟ್ಟದ ಹಾನಿಗೆ ಕಾರಣವಾಗಿತ್ತು. ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಗುಡ್ಡುಕುಸಿದು ಹಲವರ ಬದುಕು ಕಸಿದುಕೊಂಡಿತ್ತು. ಬೆಟ್ಟಗುಡ್ಡಗಳಲ್ಲಿ ದಶಕಗಳಿಂದ ಸುಭದ್ರ ಬದುಕು ಸಾಗಿಸುತ್ತಿದ್ದವರು ಬೆಳಗಾಗುವುದರೊಳಗೆ ಮನೆ, ತೋಟ, ಆಸ್ತಿ, ಆಭರಣ, ಸಾಕುಪ್ರಾಣಿಗಳು, ವಾಹನಗಳನ್ನು ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ಬೀದಿಗೆ ಬೀಳುವಂತಾಯಿತು. ಯಾವತ್ತೂ ಪರರ ಮುಂದೆ ಕೈ ಚಾಚದವರು ಎಲ್ಲವನ್ನೂ ಕಳೆದುಕೊಂಡು ಅಲ್ಲಲ್ಲಿ ತೆರೆದಿದ್ದ ಕಾಳಜಿ ಕೇಂದ್ರ ಸೇರುವಂತಾಯಿತು.

ಸರ್ಕಾರದ ಲೆಕ್ಕ ಪ್ರಕಾರ ಮಡಿಕೇರಿ ತಾಲೂಕಿನಲ್ಲಿ ೫೨೪, ಸೋಮವಾರಪೇಟೆ ತಾಲೂಕಿನಲ್ಲಿ ೮೮, ಮಡಿಕೇರಿ ನಗರದಲ್ಲಿ ೨೦೫ ಹಾಗೂ ಕುಶಾಲನಗರ ಪಟ್ಟಣದಲ್ಲಿ ೨೩ ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಕೊಡಗಿನ ಸಂಕಟಕ್ಕೆ ಇಡೀ ಕರ್ನಾಟಕವೇ ಅಂದು ಕಣ್ಣೀರಾಗಿತ್ತು. ಸಾಕು, ಸಾಕು ಎಂದು ಹೇಳುವಷ್ಟರ ಪ್ರಮಾಣದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ನೆರವಿನ ಮಹಾಪೂರವೇ ಹರಿದುಬಂದಿತ್ತು. ಅಂದಿನ ಸರ್ಕಾರವೂ ಸಹಜ ಕಾಳಜಿಯಿಂದ ಸ್ಪಂದಿಸಿ ಸಂತ್ರಸ್ತರ ನೆರವಿಗೆ ನಿಂತಿತ್ತು. ಕೊಟ್ಟ ಮಾತಿನಂತೆ ಪುನರ್ವಸತಿ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಿಕೊಟ್ಟಿತ್ತು.

ಮಡಿಕೇರಿ ಸಮೀಪದ ಕರ್ಣಂಗೇರಿಯಲ್ಲಿ ೩೫ ಮನೆಗಳು, ಮಾದಾಪುರ ಸಮೀಪದ ಜಂಬೂರುವಿನಲ್ಲಿ ೩೮೩ ಮನೆಗಳು, ಮದೆನಾಡು ಬಳಿ ೮೦ ಮನೆಗಳು, ಬಿಳಿಗೇರಿ ಸಮೀಪ ೨೨ ಮನೆಗಳು, ಗಾಳಿಬೀಡು ಗ್ರಾಮದಲ್ಲಿ ೧೪೦ ಮನೆಗಳು, ಕೆ. ನಿಡುಗಣೆ ಗ್ರಾಮದಲ್ಲಿ ೮೦ ಮನೆಗಳನ್ನು ಸಂತ್ರಸ್ತರಿಗಾಗಿ ಸರ್ಕಾರ ನಿರ್ಮಿಸಿಕೊಟ್ಟಿದೆ. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಈ ಮನೆಗಳನ್ನು ಕಟ್ಟಿಕೊಡಲಾಗಿದ್ದು ಪ್ರತಿ ಮನೆಗೂ ೯.೮೫ ಲಕ್ಷ ರೂ. ವೆಚ್ಚ ಮಾಡಲಾಗಿದೆ. ಪ್ರತಿ ಮನೆಯೂ ೫೪೭ ಚದರ ಅಡಿ ವಿಸ್ತೀರ್ಣ ಹೊಂದಿದ್ದು ಶಿಯರ್ ವಾಲ್ ತಂತ್ರಜ್ಞಾನದಿಂದ ಮನೆಗಳನ್ನು ನಿರ್ಮಿಸಲಾಗಿದೆ. ಮನೆ ನಿರ್ಮಾಣ ಆಗಿರುವ ಪ್ರತಿಯೊಂದು ಸ್ಥಳದಲ್ಲೂ ಒಂದು ಬಡಾವಣೆ ನಿರ್ಮಾಣಕ್ಕೆ ಅಗತ್ಯವಾಗಿರುವ ಮಾನದಂಡಗಳನ್ನು ಪಾಲಿಸಲಾಗಿದೆ.

ಮನೆ ನಿರ್ಮಿಸಿ ಸಂತ್ರಸ್ತರಿಗೆ ಕೊಡುವುದಷ್ಟೇ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಜವಾಬ್ದಾರಿಯಾಗಿದ್ದು, ನಿಗಮದ ಅಧಿಕಾರಿಗಳು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ತೆರಳಿದ್ದಾರೆ. ಆದರೆ ಈಗ ಈ ಬಡಾವಣೆಗಳಲ್ಲಿ ನಿರ್ವಹಣೆಯ ಸಮಸ್ಯೆ ಎದುರಾಗಿದೆ. ಬಡಾವಣೆಗಳ ನಿರ್ವಹಣೆ ಸ್ಥಳೀಯ ಆಡಳಿತಗಳು ಮಾಡಬೇಕಿದ್ದು, ಬಹುತೇಕ ಕಡೆಗಳಲ್ಲಿ ನಿರ್ಲಕ್ಷ್ಯ ತೋರಿಸಲಾಗುತ್ತಿದೆ ಎನ್ನುವ ಆರೋಪವಿದೆ. ಅದರಲ್ಲೂ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಗರಗಂದೂರಿನಲ್ಲಿರುವ ಫೀ.ಮಾ. ಕಾರ್ಯಪ್ಪ ಬಡಾವಣೆಯ ನಿವಾಸಿಗಳು ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಡುತ್ತಾರೆ.

ಇಲ್ಲಿರುವ ಶೌಚಗೃಹದ ಗುಂಡಿ ತುಂಬಿದರೂ ಅದನ್ನು ಖಾಲಿ ಮಾಡುವುದಕ್ಕೆ ಪಂಚಾಯಿತಿ ಆಡಳಿತ ಮೀನ ಮೇಷಾ ಎಣಿಸುತ್ತದೆ. ತುಂಬಾ ಒತ್ತಡ ಹೇರಿದ ನಂತರ ಬಂದು ಯಂತ್ರದ ಮೂಲಕ ಖಾಲಿ ಮಾಡಿದರೂ ಮತ್ತದೇ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲಲ್ಲಿ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡಿದ್ದು, ಕೆಲವೆಡೆ ಪೈಪ್‌ಗಳು ಒಡೆದಿರುವುದರಿಂದ ರಸ್ತೆಯ ಮೇಲೂ ಗಲೀಜು ಹರಿದು ಅಸಹ್ಯಕರ ವಾತಾವರಣ ನಿರ್ಮಾಣ ಆಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಚರಂಡಿಗಳಲ್ಲೂ ನೀರು ನಿಂತು ಸೊಳ್ಳೆಗಳ ಆವಾಸಸ್ಥಾನವಾಗಿ ಬದಲಾಗಿದೆ. ಸೊಳ್ಳೆ ಕಡಿತದಿಂದ ಹಲವರು ಈಗಾಗಲೇ ಅನಾರೋಗ್ಯಕ್ಕೂ ಒಳಗಾಗಿದ್ದಾರೆ. ಇದಕ್ಕೆಲ್ಲಾ ಅವೈಜ್ಷಾನಿಕ ಚರಂಡಿ ನಿರ್ಮಾಣ ಕಾಮಗಾರಿಯೇ ಕಾರಣ ಎಂದು ಆರೋಪಿಸಲಾಗುತ್ತಿದೆ.

ಈ ಬಡಾವಣೆ ಇಳಿಜಾರಿನಿಂದ ಕೂಡಿದ್ದು ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಇದ್ದರೂ ಕಾಂಕ್ರಿಟ್ ಚರಂಡಿ ನಿರ್ಮಿಸಿ ಕೊಳಚೆ ನೀರು ಮನೆಗಳ ಎದುರು ಸಂಗ್ರಹವಾಗುವ ಹಾಗೆ ಮಾಡಲಾಗಿದೆ. ಬಡಾವಣೆಯಿಂದ ಹೊರಕ್ಕೆ ನೀರು ಹರಿಯಲು ಸಣ್ಣ ಪೈಪ್‌ಗಳನ್ನು ಅಳವಡಿಸಲಾಗಿದ್ದರೂ, ನೀರು ಹರಿದು ಹೋಗದ ಹಾಗೆ ಎತ್ತರಿಸಲಾಗಿದೆ. ಇದರಿಂದಾಗಿ ಎಲ್ಲಾ ಮನೆಗಳಿಂದ ಹೊರಬರುವ ಕೊಳಚೆ ನೀರು ಅಲ್ಲಲ್ಲಿ ಸಂಗ್ರಹವಾಗಿ ಬಡಾವಣೆಯನ್ನು ರೋಗಗಳ ಉತ್ಪತ್ತಿ ತಾಣವನ್ನಾಗಿ ಮಾಡಲಾಗಿದೆ ಎನ್ನುತ್ತಾರೆ ಇಲ್ಲಿಯ ನಿವಾಸಿಗಳು.

ಒಂದು ಬಡಾವಣೆ ನಿರ್ಮಾಣ ಆದ ನಂತರ ಇಲ್ಲಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಆದರೆ ಇಲ್ಲಿ ಸುಸಜ್ಜಿತ ಆಟದ ಮೈದಾನ ಇಲ್ಲ. ಉದ್ಯಾನಕ್ಕೆ ಮೀಸಲಾದ ಜಾಗ ಖಾಲಿ ಬಿದ್ದಿದೆ. ಸಮುದಾಯ ಭವನ, ಅಂಗಡಿ ಮಳಿಗೆಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪಂಚಾಯಿತಿ ಕಚೇರಿಗೆಂದು ನಿರ್ಮಿಸಿದ ಕಟ್ಟದಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ನಡೆಯುತ್ತಿದೆ. ಕಸ ವಿಲೇವಾರಿ ಘಟಕ ನಿರ್ಮಾಣವಾಗಿದ್ದರೂ ಇಲ್ಲಿಗೆ ಯಂತ್ರಗಳು ಬಂದಿಲ್ಲ. ಬಡಾವಣೆ ಕಸ ಮಾತ್ರವಲ್ಲದೆ ಮಾದಾಪುರ ಪಟ್ಟಣದ ಕಸವನ್ನೂ ಇಲ್ಲಿ ತಂದು ಸುರಿಯಲಾಗುತ್ತದೆ. ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ನಡೆಯದಿರುವುದರಿಂದ ಇಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ಇದೆ.

ಸರ್ಕಾರದ ಮಾನದಂಡಗಳಂತೆಯೇ ಬಡಾವಣೆ ನಿರ್ಮಿಸಲಾಗಿದೆ. ಅಗಲವಾದ ರಸ್ತೆ, ಬೀದಿ ದೀಪ ಎಲ್ಲವೂ ಇದೆ. ಆದೆ ರಾತ್ರಿಯಲ್ಲಿ ಬೀದಿ ದೀಪಗಳು ಉರಿಯುವುದೇ ಇಲ್ಲ. ಬಡಾವಣೆ ಒಳಗೆ ವಿಸ್ತಾರ ರಸ್ತೆ ಇದ್ದರೂ ಇಲ್ಲಿಂದ ಮಾದಾಪುರಕ್ಕೆ ಸಂಪಕಿಸುವ ರಸ್ತೆ ಅತ್ಯಂತ ಕಿರಿದಾಗಿದೆ. ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ ಆಗಿ ವಾಹನ ಸವಾರಿ ಅಪಾಯಕಾರಿಯಾಗಿ ಪರಿಣಮಿಸಿದೆ. ಸಂಬಂಧಿಸಿದವರಿಗೆ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ ಚುನಾವಣಾ ನೀತಿ ಸಂಹಿತೆಯ ಅಡ್ಡಿ ತೋರಿಸುತ್ತಾರೆ. ಹೀಗಾದರೆ ನಾವು ಬದುಕುವುದು ಹೇಗೆ ಎನ್ನುವುದು ಸ್ಥಳೀಯರ ಪ್ರಶ್ನೆ.

ಮಾದಾಪುರದ ಜಂಬೂರು ಬಾಣೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯನ್ನು ಮಾದಾಪುರದ ಸಿಂಗಾಪುರ ಎಂದು ಕರೆಯುತ್ತಾರೆ. ಅಷ್ಟೆಲ್ಲಾ ಒಳ್ಳೆಯ ವ್ಯವಸ್ಥೆಗಳನ್ನು ಇಲ್ಲಿ ಮಾಡಿಕೊಟ್ಟಿದ್ದಾರೆ. ಆದರೆ ಇದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಉತ್ತಮ ಕಾಂಕ್ರಿಟ್ ರಸ್ತೆ ಇದ್ದರೂ ಚರಂಡಿಗಳಲ್ಲಿ ಕೊಳಚೆ ನೀರು ನಿಂತಿರುವುದರಿಂದ ಮೂಗು ಮುಚ್ಚಿಕೊಂಡು ತಿರುಗಾಡಬೇಕು. ಪಂಚಾಯಿತಿ ಗಮನಕ್ಕೆ ತಂದರೂ ಯಾವ ಕೆಲಸ ಮಾಡಬೇಕಾದರೂ ನೀತಿ ಸಂಹಿತೆ ನೆಪ ಹೇಳುತ್ತಾರೆ. ಕಳೆದ ವಾರ ಒಂದಿಷ್ಟು ಶುಚಿತ್ವದ ಕೆಲಸ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಸಂತ್ರಸ್ತರಾಗಿರುವ ನಮಗೆ ನೆಮ್ಮದಿಯ ಬದುಕು ಬೇಕಿದೆ.
ಎನ್.ಆರ್. ಸತ್ಯನಾರಾಯಣ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆ ನಿವಾಸಿ, ಮಾದಾಪುರ

ಬಡಾವಣೆ ಒಳಗೆ ವಿಸ್ತಾರ ರಸ್ತೆ ಇದೆ. ಆದರೆ ಬಡಾವಣೆಯಿಂದ ಮಾದಾಪುರಕ್ಕೆ ತೆರಳಲು ಇಕ್ಕಟ್ಟಿನ ಗುಂಡಿ ಬಿದ್ದ ಅಪಾಯಕಾರಿ ರಸ್ತೆಯಲ್ಲಿ ಹೋಗಬೇಕು. ಬಡಾವಣೆ ರಸ್ತೆ ಬದಿಯಲ್ಲಿ ಸುಂದರವಾದ ಬೀದಿ ದೀಪ ಅಳವಡಿಸಲಾಗಿದೆ. ಇದು ರಾತ್ರಿ ವೇಳೆ ಉರಿಯುವುದೇ ಇಲ್ಲ. ತುಂಬ ಚೆಂದದ ಪ್ರದೇಶದಲ್ಲಿ ಗಬ್ಬೆದ್ದ ವಾತಾವರಣದಲ್ಲಿ ವಿಧಿ ಇಲ್ಲದೆ ಬದುಕುವ ಪರಿಸ್ಥಿತಿ ನಮ್ಮದಾಗಿದೆ. ಬಡಾವಣೆಯೊಂದು ನಿರ್ಮಿಸಿದ ಮೇಲೆ ಅಲ್ಲಿ ವಾಸ ಮಾಡುವವರಿಗೆ ಕನಿಷ್ಠ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯೂ ನಮ್ಮನ್ನು ಆಳುವವರಿಗೆ ಇಲ್ಲವಾಗಿರುವುದು ವಿಪರ್ಯಾಸ.
ಸೂರಜ್ ಅಹಮ್ಮದ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆ ನಿವಾಸಿ, ಮಾದಾಪುರ

ಅಲ್ಲಿಯ ವಿಷಯವನ್ನು ಸ್ಥಳೀಯರು ಈಗಾಗಲೇ ನಮ್ಮ ಗಮನಕ್ಕೆ ತಂದಿದ್ದಾರೆ. ಕಳೆದ ವಾರ ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿ ಸದ್ಯದ ಮಟ್ಟಿಗೆ ಪರಿಹಾರೋಪಾಯಗಳನ್ನು ಕಲ್ಪಿಸಿ ಈ ಸಂಬಂಧ ವರದಿ ತರಿಸಿಕೊಳ್ಳಲಾಗಿದೆ. ಸ್ವಚ್ಛತೆ ಮತ್ತು ಚರಂಡಿ ವಿಷಯದಲ್ಲಿ ಮತ್ತೆ ಮತ್ತೆ ಸಮಸ್ಯೆ ಆಗುತ್ತಿರುವ ಕಾರಣ ಅದಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲಿ ಏನು ಮಾಡಿದರೆ ಸಮಸ್ಯೆ ಪರಿಹಾರ ಆಗಲಿದೆ ಎನ್ನುವುದರ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಅಲ್ಲಿನ ನಿವಾಸಿಗಳಿಗೆ ಎಲ್ಲಾ ಸೌಲಭ್ಯ ಒದಗಿಸಲಾಗುವುದು.
ವರ್ಣಿತ್ ನೇಗಿ, ಜಿ.ಪಂ. ಸಿಇಒ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net