

ಉಪ್ಪಿನಬೆಟಗೇರಿ: ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲದೆ ಜಾನುವಾರು ಮತ್ತು ಸಾಕು ಪ್ರಾಣಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ರೈತರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಯತ್ತ ತೆರಳುತ್ತಿದ್ದಾರೆ.
ಗ್ರಾಮದಲ್ಲಿರುವ ಪಶು ಆಸ್ಪತ್ರೆಯಲ್ಲಿ ಕೊಟಬಾಗಿ ಪಶು ಕೇಂದ್ರಕ್ಕೆ ನೇಮಕವಾದ ಸುರೇಶ ಅರಕೇರಿ ಎಂಬುವವರು ಉಪ್ಪಿನಬೆಟಗೇರಿ ಕೇಂದ್ರಕ್ಕೆ ಪ್ರಭಾರಿಯಾಗಿದ್ದಾರೆ. ಹೀಗಾಗಿ, ಇಲ್ಲಿ ಕಿರಿಯ ವೈದ್ಯಕೀಯ ಪರಿವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಅವರು ಸರಿಯಾಗಿ ಆಸ್ಪತ್ರೆಗೆ ಬರುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ಉಪ್ಪಿನಬೆಟಗೇರಿ ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಗೆ ಯಾದವಾಡ, ಲೋಕೂರ, ಪುಡಕಲಕಟ್ಟಿ, ಹಾಗೂ ಉಪ್ಪಿನಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ 6-7 ಹಳ್ಳಿಗಳು ಒಳಪಡುತ್ತವೆ. ನಿತ್ಯ ರೈತರು ತಮ್ಮ ಜಾನುವಾರುಗಳನ್ನು ಚಿಕಿತ್ಸೆ ಸೇರಿದಂತೆ ಕೃತಕ ಗರ್ಭಧಾರಣೆಗೆಂದು ತರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಕಾಯಂ ವೈದ್ಯರೇ ಇಲ್ಲ. ಅವರ ಬದಲಿಗೆ ಕಿರಿಯ ವೈದ್ಯಕೀಯ ಪರಿವೀಕ್ಷಕ ಬಸವರಾಜ ಪೋಳ ಎಂಬುವವರನ್ನು ನೇಮಕ ಮಾಡಲಾಗಿದೆ. ಆದರೆ, ಅವರು ಸರಿಯಾಗಿ ಆಸ್ಪತ್ರೆಗೆ ಬರುತ್ತಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
ಬುಧವಾರ ಆಸ್ಪತ್ರೆಗೆ ಚಿಕಿತ್ಸೆಗೆಂದು ಶಿಬಾರಗಟ್ಟಿಯಿಂದ ತಂದ ಟಗರಿನ ಮರಿಯೊಂದು ವೈದ್ಯರಿಲ್ಲದ ಕಾರಣ ಸರಿಯಾಗಿ ಚಿಕಿತ್ಸೆ ಮೃತಪಟ್ಟಿದೆ. ಸಕಾಲಕ್ಕೆ ಚಿಕಿತ್ಸೆ ನೀಡಿದ್ದರೆ, ಬದುಕುಳಿಯುತ್ತಿದ್ದ ಮರಿ ಇಲಾಖೆಯವರ ನಿಷ್ಕಾಳಜಿಯಿಂದ ಸಾವನ್ನಪ್ಪಿದೆ ಎಂದು ರೈತರು ಪಶು ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡುಕರ ಅಡ್ಡೆ: ಸುಸಜ್ಜಿತವಾದ ಆಸ್ಪತ್ರೆ ಆವರಣವನ್ನು ಕುಡುಕರು ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ಮದ್ಯ ವ್ಯಸನಿಗಳು ಕಾಂಪೌಂಡ್ ಒಳಗೆ ಹೋಗಿ ಮದ್ಯ ಸೇವಿಸಿ ಬಾಟಲಿ, ಪ್ಲಾಸ್ಟಿಕ್ ಗ್ಲಾಸ್ ಇತರೆ ವಸ್ತುಗಳನ್ನು ಅಲ್ಲೇ ಎಸೆದು ಹೋಗುತ್ತಾರೆ.
ಸಿಬ್ಬಂದಿ ಕೊರತೆಯಿಂದ ಕೆಲ ವೈದ್ಯರು ನಾಲ್ಕಾರು ಪಶು ಆಸ್ಪತ್ರೆ ನಿರ್ವಹಿಸಬೇಕಾಗಿದ್ದರಿಂದ ಸಮಸ್ಯೆಗಳು ಎದುರಾಗಿವೆ. ರೈತರು ಸಹಕರಿಸಬೇಕು. ಜತೆಗೆ ಉಪ್ಪಿನಬೆಟಗೇರಿ ಪಶು ವೈದ್ಯಕೀಯ ಪರಿವೀಕ್ಷಕ ಬಸವರಾಜ ಪೋಳ ಎಂಬುವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿದ್ದು, ಅವರ ಸಂಬಳ ತಡೆ ಹಿಡಿಯಲಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. | ಡಾ.ಸದಾಶಿವ ಉಪ್ಪಾರ, ಉಪ ನಿರ್ದೇಶಕ, ಪಶು ಇಲಾಖೆ ಧಾರವಾಡ ಉಪ್ಪಿನಬೆಟಗೇರಿ ಪಶು ಆಸ್ಪತ್ರೆಗೆ ಚಿಕಿತ್ಸೆಗೆಂದು ಟಗರಿನ ಮರಿ ತಂದಿದ್ದೆ. ಆದರೆ, ಇಲ್ಲಿ ವೈದ್ಯರಿಲ್ಲದ ಕಾರಣ ಮರಿಗೆ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದೆ. ಇದಕ್ಕೆ ಪರಿಹಾರ ನೀಡಬೇಕು. | ಉಮೇಶ ಪೊಮೋಜಿ, ಟಗರಿನ ಮಾಲೀಕ, ಶಿಬಾರಗಟ್ಟಿ