

ಮೈಸೂರು: ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಬದಲಿಗೆ ಓದುವ ಪರಿಕಲ್ಪನೆಯೇ ಬದಲಾಗಿದೆ. ಆಡಿಯೋ, ವಿಡಿಯೋ ಮೂಲಕ ಕೇಳುವುದು, ನೋಡುವುದನ್ನು ಓದು ಎಂದೇ ಪರಿಭಾವಿಸಬೇಕಿದೆ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದರು.
ವಿಸ್ಮಯ ಪ್ರಕಾಶನದ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸಾತನೂರು ದೇವರಾಜ್ ಅವರ ‘ಅಭಿವ್ಯಕ್ತಿ ಸಂಪದ’ ಮತ್ತು ಡಾ.ಬಿ.ಬಸವರಾಜು ಅವರ ‘ಕಾಡು ಮಲ್ಲಿಗೆ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಓದುವ ಸ್ವರೂಪ ಪರಿವರ್ತನೆಯಾಗಿದೆ. ಕೇಳುವುದೂ ಸಹ ಓದಿನ ರೂಪವಾಗಿದೆ. ಆಡಿಯೋ ರೂಪದಲ್ಲಿ ಕೃತಿಯನ್ನು ಆಲಿಸುವ ಮೂಲಕ ಓದಲಾಗುತ್ತಿದ್ದು, ಸಾಹಿತ್ಯ ಚರಿತ್ರೆ ಕೃತಿಗಳು ಸಹ ಧ್ವನಿಮುದ್ರಿಕೆ ಮಾದರಿಯಲ್ಲೇ ಬಹಳಷ್ಟು ಬಂದಿವೆ ಎಂದರು.
ದೇಜಗೌ ಅವರು ವಿಶ್ವಕೋಶ ಪ್ರಕಟಣೆಗೆ ಮುಖ್ಯಮಂತ್ರಿಯ ಬಳಿ ಧನ ಸಹಾಯ ಕೇಳಿದಾಗ ‘ಆ ದುಡ್ಡಿನಲ್ಲಿ ಅಣೆಕಟ್ಟೆಯನ್ನೇ ನಿರ್ಮಿಸಬಹುದು’ ಎಂದಿದ್ದರು. ಇದಕ್ಕೆ ಪ್ರತಿಯಾಗಿ ದೇಜಗೌ ಅವರು ‘ಅಣೆಕಟ್ಟೆ ಕಟ್ಟುವಷ್ಟೇ ಜ್ಞಾನದ ಅಣೆಕಟ್ಟೆ ಕಟ್ಟುವುದು ಮುಖ್ಯ’ ಎಂದು ಮೌಲಿಕವಾದ ಮಾತು ಆಡಿದ್ದರು. ಹೀಗಾಗಿ ಗ್ರಂಥಾಲಯಗಳು ಜ್ಞಾನದ ಅಣೆಕಟ್ಟೆಗಳು. ಅಲ್ಲಿ ಯಾವಾಗಲೂ ಸಮೃದ್ಧವಾದ ನೀರಿರಬೇಕು. ಅದು ಎಂದೂ ಬತ್ತಬಾರದು. ಈ ಕಾರಣಕ್ಕಾಗಿ ಸರ್ಕಾರ ಪುಸ್ತಕ ಖರೀದಿಗೆ ಗಮನ ನೀಡಬೇಕು ಎಂದರು.
ಸಾಹಿತಿ ಪ್ರೊ.ಸಿ.ನಾಗಣ್ಣ, ಕನ್ನಡ ಪ್ರಾಧ್ಯಾಪಕಿ ಡಾ.ಬಿ.ಪಿ.ಆಶಾಕುಮಾರಿ, ಲೇಖಕ ಸತೀಶ್ ಜವರೇಗೌಡ, ಕೃತಿಕಾರರಾದ ಸಾತನೂರು ದೇವರಾಜು, ಡಾ.ಬಿ.ಬಸವರಾಜು, ಪ್ರಕಾಶಕ ಪ್ರಕಾಶ್ ಚಿಕ್ಕಪಾಳ್ಯ, ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ ಇದ್ದರು.