ದೇಹವನ್ನು ದೇವಾಲಯವಾಗಿಸುವುದೇ ವೀರಶೈವ ತತ್ವ; ಶಿವಗಂಗೆ ಸ್ವಾಮೀಜಿ ವಿಶ್ಲೇಷಣೆ, ಶ್ರೀ ರೇಣುಕಾಚಾರ್ಯ, ಬಸವೇಶ್ವರ ಜಯಂತಿ

veera
Published on

ಬೆಂಗಳೂರು : ಹುಟ್ಟುವಾಗ ಪ್ರತಿಯೊಬ್ಬ ವ್ಯಕ್ತಿಯೂ ಕೇವಲ ದೇಹ ಧರಿಸಿ ಭೂಮಿಗೆ ಬರುತ್ತಾನೆ. ತನ್ನ ಸಾಧನೆಯಿಂದ ಆ ದೇಹವನ್ನು ದೇವಾಲಯವಾಗಿ ಪರಿವರ್ತಿಸುವುದೇ ವೀರಶೈವ ತತ್ವ ಎಂದು ಶಿವಗಂಗೆ ಮೇಲಣಗವಿ ಮಠದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಬಸವನಗುಡಿಯ ವೀರಶೈವ ಕ್ಷೇಮಾಭಿವೃದ್ಧಿ ಸಂಘವು ನಿಜಗುಣ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಮತ್ತು ಜಗಜ್ಯೋತಿ ಬಸವೇಶ್ವರ ಜಯಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯನ ಶರೀರವು ಪಂಚಭೂತಗಳಿಂದ ನಿರ್ಮಾಣಗೊಂಡಿದ್ದು, 36 ತತ್ವಗಳನ್ನು ಒಳಗೊಂಡಿದೆ. ಮಾಂಸಪಿಂಡವಾಗಿರುವ ದೇಹವನ್ನು ಮಂತ್ರಪಿಂಡವಾಗಿಸಿ ದೇವರು ವಾಸ ಮಾಡುವ ಪವಿತ್ರ ದೇವಾಲಯವನ್ನಾಗಿ ಪರಿವರ್ತಿಸಲು ಜಗದ್ಗುರು ರೇಣುಕಾಚಾರ್ಯರು ಶಿವಾದ್ವೆತ ಸಿದ್ಧಾಂತವನ್ನು ಮನುಕುಲಕ್ಕೆ ನೀಡಿದ್ದಾರೆ. ಬಸವೇಶ್ವರರು ದೇಹವೇ ದೇಗುಲ ಎಂದು ಸಾರಿದ್ದಾರೆ. ಮರದಲ್ಲಿರುವ ಹೂವು, ಎಲೆ, ಕಾಂಡ, ಕಾಯಿ, ಹಣ್ಣು ಹೀಗೆ ಬೇರೆ ಬೇರೆಯಾಗಿದ್ದರೂ ಅವುಗಳೆಲ್ಲಕ್ಕೂ ಆಧಾರವಾಗಿರುವ ತಾಯಿ ಬೇರು ಒಂದೇ ಆಗಿದೆ. ಹಾಗೇ ಭಗವಂತನೇ ಆಧಾರವಾಗಿರುವ ಧರ್ಮದ ಅಬ್ಯುದಯಕ್ಕೆ ಹಲವು ಆಚಾರ್ಯರು, ಸಂತ, ಮಹಾಂತರ ಕೊಡುಗೆ ಇದೆ. ಅಂತಹವರನ್ನು ಸ್ಮರಿಸಲು ವೀರಶೈವ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿರುವ ಕಾರ್ಯ ಸ್ತುತ್ಯಾರ್ಹ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 80 ವರ್ಷ ಮೇಲ್ಪಟ್ಟ ಸಂಘದ ಸದಸ್ಯರಿಗೆ ಮತ್ತು ಆಪರೇಷನ್ ಸಿಂಧೂರದಲ್ಲಿ ಪಾಲ್ಗೊಂಡ ವೀರಯೋಧರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಎಂ.ಎನ್.ಪರಮಶಿವಪ್ಪ, ಸದಸ್ಯರಾದ ಷಡಕ್ಷರ ಶಾಸಿಗಳು, ಉಪನ್ಯಾಸಕಿ ವಿಜಯಾ ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net