

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಮಾಧ್ಯಮದಲ್ಲಿ ಮಾತ್ರ ಬದುಕನ್ನು ಸಹಜವಾಗಿ ಅರಳಿಸಿಕೊಳ್ಳಬಹುದು. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಅಂತರಂಗದ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ಇದು ಗೊತ್ತಿದ್ದರೂ ನಾವೆಲ್ಲ ಇಂಗ್ಲಿಷ್‌ನ ಬೆನ್ನು ಹತ್ತಿ ಹೊರಟಿರುವುದು ವಿಷಾದನೀಯ. ಶೈಕ್ಷಣಿಕ ನಿಯಮಾವಳಿ ರೂಪಿಸುವವರು ಇದನ್ನು ಗಮನಿಸಬೇಕು ಎಂದು ಜನತಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರ ಕರ್ನಾಟಕ ವಿಶ್ವ ವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಪರಿಷತ್, ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಜೆಎಸ್‌ಎಸ್‌ನ ಡಿಆರ್‌ಎಚ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶರಣರ ಮೌಲ್ಯಗಳ ಪ್ರಸ್ತುತತೆ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಶರಣರ ಮೌಲ್ಯಗಳ ಪ್ರಸ್ತುತತೆ ಕುರಿತು ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, 12ನೇ ಶತಮಾನದಲ್ಲಿ ಕರ್ನಾಟಕದ ಕಲ್ಯಾಣದಲ್ಲಿ ಮಾನವೋದ್ಧಾರದ ಕ್ರಾಂತಿ ನಡೆಯಿತು. ಅಂದು ನಡೆದ ಮಾನವ ಚಳವಳಿ ನೇತೃತ್ವ ವಹಿಸಿದವರು ಬಸವಣ್ಣನವರು. ಅವರ ಅನುಯಾಯಿಗಳಾದವರೆಲ್ಲ ಕಾಯಕ ಜೀವಿಗಳು. ಆ ಮೂಲಕ ಒಂದು ಪರ್ಯಾಯ ಸಂಸ್ಕೃತಿ ನಿರ್ಮಿಸಿದರು ಎಂದರು.
ಡಾ. ಮಹಾದೇವಿ ಹಿರೇಮಠ ಮಾತನಾಡಿದರು. ಕನ್ನಡ ಅಧ್ಯಾಪಕರ ಪರಿಷತ್ ಅಧ್ಯಕ್ಷ ಡಾ. ಪ್ರಭು ಗಂಜಿಹಾಳ ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಎಚ್. ನಾಗಚಂದ್ರ, ಡಾ.ಪುಷ್ಪ ಬಸನಗೌಡರ, ಪ್ರೊ. ವಿ.ಎಂ. ಗುರುಮಠ, ಡಾ.ವೈ.ಎಂ. ಭಜಂತ್ರಿ, ಡಾ.ಜಿನದತ್ತ ಹಡಗಲಿ, ಡಾ.ಎಸ್.ವಿ.ಮನಗುಂಡಿ, ಕವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡದ ಅಧ್ಯಾಪಕರು, ಇತರರು ಇದ್ದರು.
ಡಾ.ಚಾಮರಾಜ ಕಮ್ಮಾರ ನಿರೂಪಿಸಿದರು. ಡಾ.ಎಸ್.ಎಸ್. ದೊಡ್ಡಮನಿ ನಿರೂಪಿಸಿದರು. ಡಾ.ಮನಗುಂಡಿ ವಂದಿಸಿದರು.