

ಹಾನಗಲ್ಲ: 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಹಲವು ಶರಣರು ವಚನಗಳ ಮೂಲಕ ನೀಡಿದ ಉನ್ನತ ಮೌಲ್ಯಗಳನ್ನು ಪಾಲಿಸುವ ಮೂಲಕ ಶಿವಶರಣರಿಗೆ ಗೌರವ ನೀಡಬೇಕಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
9 ಶತಮಾನಗಳು ಕಳೆದರೂ ಶರಣರು ನೀಡಿದ ಸಂದೇಶಗಳನ್ನು ಪಾಲನೆ ಮಾಡದೇ ಮೌಢ್ಯದಲ್ಲಿಯೇ ಉಳಿದಿದ್ದೇವೆ. ಅಸ್ಪೃಶ್ಯತೆ, ಮೂಢನಂಬಿಕೆ ಹೋಗಲಾಡಿಸಲು ಶರಣರು ಶ್ರಮಿಸಿದ್ದಾರೆ. ನೇರ, ನಿಷ್ಠುರ ನುಡಿ ಸಂದೇಶಗಳಿಂದಲೇ ಅಂಬಿಗರ ಚೌಡಯ್ಯನವರು ಹೆಸರುವಾಸಿಯಾದವರು. ನಿರಂತರ ಅನ್ವೇಷಣೆ-ಪ್ರಶ್ನಿಸುವುದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿಗಳಾದ ಶಿವಕುಮಾರ ಸ್ವಾಮೀಜಿ ಅವರು ಅಧ್ಯಾತ್ಮ, ಜ್ಞಾನ ಹಾಗೂ ಅನ್ನ ದಾಸೋಹ ಮಾಡುವ ಮೂಲಕ 12ನೇ ಶತಮಾನದ ಶರಣರ ಸಂದೇಶಗಳನ್ನು ಪಾಲಿಸಿ ಇಂದಿನ ಪೀಳಿಗೆಗೆ ತೋರಿಸಿದ್ದಾರೆ ಎಂದರು.
ಗಂಗಾಮತ ಸಮಾಜದ ಮುಖಂಡ ಚಂದ್ರಪ್ಪ ಜಾಲಗಾರ ಮಾತನಾಡಿ, ಶರಣರೆಲ್ಲರೂ ಒಂದೊಂದು ಅಂಕಿತನಾಮ ಇಟ್ಟುಕೊಂಡು ವಚನಗಳನ್ನು ರಚಿಸಿದರೆ, ಅಂಬಿಗರ ಚೌಡಯ್ಯನವರು ಯಾವುದೇ ಅಂಕಿತನಾಮ ಬಳಸಿಕೊಳ್ಳದೇ ಅಂಬಿಗನೆಂದು ಹೇಳಿಕೊಂಡರು. ನಿಷ್ಠುರವಾದಿಗಳಾದ್ದರಿಂದಲೇ ಅವರನ್ನು ನಿಜಶರಣ ಎಂದು ಎಲ್ಲರೂ ಕರೆಯುತ್ತಿದ್ದರು ಎಂಬುದು ದಾಖಲಾಗಿದೆ. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ಚೌಡಯ್ಯನವರು ನೇರವಾಗಿ ಖಂಡಿಸಿದ್ದಾರೆ ಎಂದರು.