

| ಕೃಷ್ಣರಾಜ ಕುತ್ಪಾಡಿ
‘ಸುಮಂತ್ರ! ಧರ್ವಿುಷ್ಠರಾದ ರಾಜರಿಗೆಲ್ಲ ಕರೆ ಕಳುಹಿಸಬೇಕು. ಎಲ್ಲ ವರ್ಣದವರನ್ನು ಯಜ್ಞದಲ್ಲಿ ಭಾಗವಹಿಸಲು ಆಮಂತ್ರಿಸಬೇಕು. ಕೇಕಯ ಅಧಿಪತಿ, ಮಿಥಿಲಾಧಿಪತಿಗಳನ್ನು ಸ್ವತಃ ನೀನೇ ಕರೆತರಬೇಕು. ಅಂಗಾಧಿಪತಿ ರೋಮಪಾದ ರಾಜನ ಹತ್ತಿರದ ಗೆಳೆಯ. ಅವನನ್ನು ಆದರದಿಂದ ಬರಮಾಡಿಕೊಳ್ಳಬೇಕು. ಜ್ಞಾನಿಗಳೆಲ್ಲರೂ ಭಾಗವಹಿಸುವಂತೆ ಆಗಬೇಕು. ಅದರಂತೆ ಶಿಲ್ಪಿಗಳು, ಬಡಗಿಗಳು, ಕಮ್ಮಾರ, ಚಮ್ಮಾರ, ಚಿನಿವಾರ ಮೊದಲಾದ ಕುಶಲಕರ್ವಿುಗಳನ್ನು ಸತ್ಕರಿಸಿ ಬೇಗನೆ ಕಾರ್ಯಪ್ರವೃತ್ತರನ್ನಾಗಿಸಬೇಕು. ಹಾಗೆ ಬಂದವರ ಅಶನ ವಸನ ವಾಸಗಳನ್ನು ಚೆನ್ನಾಗಿ ವ್ಯವಸ್ಥೆ ಮಾಡಬೇಕು’. ದಶರಥ, ವಸಿಷ್ಠ, ಸುಮಂತ್ರ ಇನ್ನುಳಿದ ಎಲ್ಲ ಮಂತ್ರಿಗಳ ಒಕ್ಕೊರಲಿನ ಧ್ವನಿ ‘ಕರೆದುಕೊಂಡು ಬಂದ ಎಲ್ಲರಿಗೂ ಎಲ್ಲವೂ ಚೆನ್ನಾಗಿ ಸಿಗುವಂತಾಗಬೇಕು. ಯಾರನ್ನು ಅಲಕ್ಷಿಸಕೂಡದು’ ಎಂದು. ಇಂತಹ ಪರಂಪರೆಯ ಭಾರತೀಯರಿಗೆ ಮನುಷ್ಯತ್ವದ ಹೊಸ ಪಾಠದ ಅವಶ್ಯಕತೆ ಇದೆಯೆ.? ನೆತ್ತರಿನಲ್ಲಿ ಹರಿದು ಬಂದ ಗುಣ ಅದು.
ದಾತವ್ಯಮನ್ನಂ ವಿಧಿವತ್ ಸತ್ಕೃತ್ಯ ನ ತು ಲೀಲಯಾ|
ಸರ್ವವರ್ಣಾ ಯಥಾಪೂಜಾಂ ಪ್ರಾಪ್ನುವಂತಿ ಸುಸತ್ಕೃತಾಃ||
‘ಬಂದವರನ್ನು ಚೆನ್ನಾಗಿ ಸತ್ಕರಿಸಿ ಬರಮಾಡಿಕೊಂಡು ಅನ್ನವಿಕ್ಕಬೇಕು. ಎಲ್ಲ ವರ್ಗದವರನ್ನು ಗೌರವಿಸಬೇಕು. ಬಂದವರು ಅವರಾಗಿ ಉಂಡು ಹೋಗುವರೆಂಬ ಭಾವ ಕೂಡದು’.
ನ ಚಾವಜ್ಞಾ ಪ್ರಯೋಕ್ತವ್ಯಾ ಕಾಮಕ್ರೋಧವಶಾದಪಿ|
ಯಜ್ಞಕರ್ಮಸು ಯೇ ವ್ಯಗ್ರಾ ಪುರುಷಾಃ ಶಿಲ್ಪಿನಸ್ತಥಾ||
ತೇಷಾಮಪಿ ವಿಶೇಷೇಣ ಪೂಜಾ ಕಾರ್ಯಾ ಯಥಾಕ್ರಮಂ|
ತೇ ಚ ಸ್ಯುಃ ಸಂಭೃತಾಃ ಸರ್ವೆ ವಸುಭಿಭೋಜನೇನ ಚ||
‘ಎಲ್ಲಿಯೂ ತಾತ್ಸಾರ ಸಲ್ಲದು. ಬಯಕೆ, ಸಿಟ್ಟುಗಳಿಗೆ ಬಲಿಯಾಗಿ ತಪ್ಪು ನಡೆಯಬಾರದು. ಕೆಲಸದ ಒತ್ತಡದಿಂದ ಅನ್ನ, ನೀರು, ನಿದ್ರೆ ತೊರೆದು ಕಾರ್ಯ ಮಾಡಿದವರು ತಿಳಿಯದೆ ಸಿಟ್ಟಾಗಬಹುದು. ಅವರು ವ್ಯಗ್ರರಾದರೂ ನಮ್ಮ ಪರಿಚಾರಕರು ಅಷ್ಟೇ ಪ್ರೀತಿಯಿಂದ ಅವರಿಗೆ ಹೊಟ್ಟೆತುಂಬ ಅನ್ನ, ಕೈ ತುಂಬ ಉಡುಗೊರೆ ಇತ್ತು ಆದರಿಸಬೇಕು. ಕೊಡುವುದರಲ್ಲಿ ಅವಗಣನೆ ಎಂದಿಗೂ ಸಲ್ಲದು. ಬೇಕಾದರೆ ಬೇಕಿದ್ದನ್ನು ಬೇಡಿಕೊಂಡು ಹೋಗುತ್ತಾರೆ ಎಂಬ ತಿರಸ್ಕಾರ ಭಾವ ಸರಿಯಲ್ಲ. ಹಾಗೆ ದಾನ ಮಾಡಿದರೆ ಮಾಡಿದ ದಾನವೇ ಕೊಟ್ಟವನನ್ನು ಕೊಂದುಬಿಡುತ್ತದೆ. ಇದಕ್ಕೆ ಸಂಶಯವಿಲ್ಲ’. ಇಂತಹದೇ ಮಾತುಗಳು ರಾಮಾಯಣದ ಉದ್ದಕ್ಕೂ ಇಣುಕುತ್ತಲೇ ಹೋಗುತ್ತವೆ. ಮಾನವೀಯತೆಯನ್ನು ಪ್ರತಿಕ್ಷಣವೂ ಮರೆಯದಂತೆ ಎಚ್ಚರಿಸುವ ಈ ರಾಮಾಯಣದ ಮಾತು ರಾಮರಾಜ್ಯದ ಮೌಲ್ಯವಲ್ಲವೇ?
(ಲೇಖಕರು ಸಂಸ್ಕೃತ ಉಪನ್ಯಾಸಕರು)