ಬ್ಯಾಲೆಟ್ ಪೇಪರ್ ಬಳಕೆ ಮೂರ್ಖತನದ ಪರಮಾವಧಿ

MP shettar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ)ಗಳ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಧರಿಸಿರುವ ರಾಜ್ಯ ಸರ್ಕಾರದ ತೀರ್ವನವು ಮೂರ್ಖತನದ ಪರಮಾವಧಿಯಾಗಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್​ಗೆ ಗೊತ್ತಾಗಿದೆ. ಹಾಗಾಗಿ ಗುಂಡಾಗಿರಿ ಮಾಡಿ ಗೆಲ್ಲಲು ಹವಣಿಸುತ್ತಿದೆ. ದೇಶದಲ್ಲಿ ಜನರ ವಿಶ್ವಾಸ ಕಳೆದುಕೊಂಡಿರುವುದರಿಂದ ಕಾಂಗ್ರೆಸ್ ಸೋಲುತ್ತಿದೆ. ಇದನ್ನು ಮರೆಮಾಚಲು ಮತಯಂತ್ರ(ಇವಿಎಂ) ಕಾರಣ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದರು.

ಮತ ಯಂತ್ರಗಳು ಸರಿಯಿಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಹೇಗೆ 136 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿತ್ತು? ಈ ಹಿಂದೆ ಬ್ಯಾಲೆಟ್ ಬಾಕ್ಸ್​ಗಳನ್ನು ಕಳುವು ಮಾಡಿರುವ ಅನೇಕ ಉದಾಹರಣೆಗಳಿವೆ. ತಮ್ಮ ರಾಷ್ಟ್ರ ನಾಯಕ ರಾಹುಲ ಗಾಂಧಿ ಮೆಚ್ಚಿಸುವ ಉದ್ದೇಶದಿಂದ ಈ ಕಸರತ್ತು ನಡೆಸಿದ್ದಾರೆ ಎಂದು ಆರೋಪಿಸಿದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್​ಐಟಿ ರಚನೆ ಮಾಡಿರುವುದು ರಾಜ್ಯ ಸರ್ಕಾರ. ಶ್ರೀ ಕ್ಷೇತ್ರ ಧರ್ಮಸ್ಥ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲೆ ಆಗುತ್ತಿರುವ ಅಪಪ್ರಚಾರಕ್ಕೆ ಯಾಕೆ ಕಡಿವಾಣ ಹಾಕಲಿಲ್ಲ. ಎಸ್​ಐಟಿ ಮಧ್ಯಂತರ ವರದಿ ಇನ್ನೂ ಯಾಕೆ ನೀಡಿಲ್ಲ? ವಿದೇಶದಿಂದ ಹಣ ಸಂದಾಯವಾಗುತ್ತಿದ್ದು, ಈ ಬಗ್ಗೆ ಎಸ್​ಐಟಿ ಏಕೆ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ಈ ಪ್ರಕರಣವನ್ನು ಎನ್​ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net