

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಹಳೇ ಸೇತುವೆಯನ್ನು ಹೆದ್ದಾರಿ ಪ್ರಾಧಿಕಾರ ಮಂಗಳವಾರ ದಿಢೀರ್ ರಿಪೇರಿ ಮಾಡಲು ಹೊರಟ ಪರಿಣಾಮ ಮತ್ತೆ ದಿನವಿಡೀ ಮೈಲುದ್ದ ಸಾಲು ವಾಹನ ದಟ್ಟಣೆ ಉಂಟಾಗಿ ಸಂಚಾರಿಗಳು ಪರದಾಟ ನಡೆಸುವಂತಾಯಿತು.
ಜು.23ರಂದು ಹಳೇ ಸೇತುವೆ ರಿಪೇರಿ ಹಿನ್ನೆಲೆಯಲ್ಲಿ ದಿನವಿಡೀ ವಾಹನ ದಟ್ಟಣೆ ಉಂಟಾಗಿ ಜನ ಹೈರಾಣಾಗಿದ್ದರು. ಅಂದು ಸಿಮೆಂಟ್, ಕಲ್ಲು ಹುಡಿ ಹಾಕಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗಿತ್ತು. ವಾರದೊಳಗೆ ಅವು ಎದ್ದು ಹೋಗಿದ್ದು, ಮತ್ತೆ ಮರಣ ಗುಂಡಿಗಳು ಉಂಟಾಗಿವೆ. ಸೇತುವೆಯಲ್ಲಿ ಸಿಮೆಂಟ್ ಎದ್ದು ಹೋಗಿ ಕಬ್ಬಿಣದ ಸರಳುಗಳು ಕಾಣಿಸಲಾರಂಭಿಸಿದ್ದವು. ಇದನ್ನು ಸರಿಪಡಿಸಲು ಮತ್ತೆ ಸೇತುವೆ ಬ್ಲಾಕ್ ಮಾಡಿದ ಹಿನ್ನೆಲೆಯಲ್ಲಿ ಒಂದೇ ಸೇತುವೆಯಲ್ಲಿ ವಾಹನಗಳು ಸಂಚರಿಸಿದ ಪರಿಣಾಮ ವಾಹನ ದಟ್ಟಣೆಗೆ ಕಾರಣವಾಯಿತು.
* ಆಡಳಿತಕ್ಕೆ ಜನರ ಶಾಪ: ಕೂಳೂರು ಸೇತುವೆಯಲ್ಲಿ ಕಾಮಗಾರಿ ನಡೆಸುವ ಬಗ್ಗೆ ಈ ಬಾರಿ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಸೇತುವೆ ಬಂದ್ ಮಾಡಿದ ಪರಿಣಾಮ ಬೈಕಂಪಾಡಿಯಿಂದ ಕೊಟ್ಟಾರಚೌಕಿ ತನಕ ವಾಹನ ದಟ್ಟಣೆ ಉಂಟಾಯಿತು. ಇದರಿಂದ ರೋಗಿಗಳನ್ನು ಕರೆ ತರುತ್ತಿದ್ದ ಆಂಬ್ಯುಲೆನ್ಸ್ಗಳು, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳಿಗೆ ಸಂಚರಿಸಬೇಕಾದ ತುರ್ತು ಪ್ರಯಾಣಿಕರು ಪರದಾಡಿದರು. ಕಳೆದ ಬಾರಿ ಮುನ್ಸೂಚನೆ ನೀಡಿದ್ದರು. ಆದರೆ ಈ ಬಾರಿ ದಿಢೀರ್ ರಸ್ತೆ ರಿಪೇರಿಗೆ ಮುಂದಾಗಿ ಹಳೇ ಸೇತುವೆ ಬಂದ್ ಮಾಡಿರುವುದರಿಂದ ಸಾವಿರಾರು ಜನರಿಗೆ ತೊಂದರೆಯಾಗಿದೆ. ಇದಕ್ಕೆ ಯಾರು ಹೊಣೆ? ಅಧಿಕಾರಿಗಳ ಬೇಜಾವಬ್ದಾರಿಯೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಕೂಳೂರು ಹೊಸ ಸೇತುವೆಯಲ್ಲಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗಿತ್ತು. ಪರಿಣಾಮ ನಂತೂರುನಿಂದ ಬೈಕಂಪಾಡಿ ತನಕ ವಾಹನ ದಟ್ಟನೆ ಉಂಟಾಯಿತು. ಆಂಬ್ಯುಲೆನ್ಸ್ಗಳು ದಟ್ಟಣೆಯೊಳಗೆ ಸಿಲುಕಿ ಮುಂದಕ್ಕೆ ಹೋಗಲು ಒದ್ದಾಡಿದವು. ಸಂಜೆಯ ವೇಳೆ ಒಂದು ಕಿ.ಮೀ. ಸಾಗಲು ಒಂದು ಗಂಟೆಗೂ ಅಧಿಕ ಸಮಯ ಹಿಡಿಯಿತು. ಯಾವುದೇ ಮುನ್ಸೂಚನೆ ನೀಡದೆ ಕಾಮಗಾರಿ ನಡೆಸಿ ಜನರ ಸಂಚಾರಕ್ಕೆ ಅಡಚಣೆ ಮಾಡಿದ ರಾಷ್ಟ್ರೀಯ ಹೆದ್ದರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ಹಿಡಿಶಾಪ ಹಾಕಿದರು. ಕೂಳೂರು, ಪಣಂಬೂರು, ಬೈಕಂಪಾಡಿ ಮೊದಲಾದ ಕಡೆ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಶ್ರಮಿಸಿದರು. ಆದರೆ ಮೈಲುದ್ದಕ್ಕೆ ವಾಹನ ದಟ್ಟಣೆ ಉಂಟಾದ ಕಾರಣ ಪೊಲೀಸರೂ ಏನೂ ಮಾಡುವಂತಿರಲಿಲ್ಲ.