ಗೊಂದಲ ನಿವಾರಣೆಗೆ ಆಗ್ರಹ

13_01_Mdy_Student Protest
Published on

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದಡಿಯೇ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ವಿವಿಯ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ಎದುರು ಜಮಾವಣೆಗೊಂಡ ವಿದ್ಯಾರ್ಥಿಗಳು, ಸರ್ಕಾರದ ಆದೇಶದಿಂದ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಇದನ್ನು ಬಗೆಹರಿಸಿಕೊಡಬೇಕು ಎಂದು ಆಗ್ರಹಿಸಿದರು.

2019-20ನೇ ಸಾಲಿನಲ್ಲಿ ಮಂಡ್ಯ ವಿವಿಯ ಪ್ರವೇಶಾತಿ ಪ್ರಕಟಣೆಯನ್ವಯ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಿ ದಾಖಲಾತಿ ಪಡೆಯಲಾಗಿದೆ. ಅಂತೆಯೇ, ಸಿ1, ಸಿ2 ಪರೀಕ್ಷೆಗಳನ್ನು ಮಂಡ್ಯ ವಿವಿ ಶಿರೋನಾಮೆ ಇರುವ ಉತ್ತರ ಪತ್ರಿಕೆಯಲ್ಲಿಯೇ ಬರೆಯಲಾಗಿದೆ. ಈ ನಡುವೆ ಭ್ರಷ್ಟಾಚಾರದ ಆರೋಪದ ಮೇಲೆ ವಿವಿಯ ವಿಶೇಷಾಧಿಕಾರಿಯನ್ನು ವರ್ಗಾವಣೆಗೊಳಿಸಿದ ರಾಜ್ಯ ಸರ್ಕಾರ, ಸಧ್ಯದ ಮಟ್ಟಿಗೆ ಮಹಾವಿದ್ಯಾಲಯದ ಪ್ರಾಂಶುಪಾಲರನ್ನೇ ಪ್ರಭಾರ ವಿಶೇಷಾಧಿಕಾರಿಯಾಗಿ ಹಾಗೂ ಈ ವರ್ಷದ ಪರೀಕ್ಷೆಯನ್ನು ಮಹಾವಿದ್ಯಾಲಯ ಶಿರೋನಾಮೆದಡಿಯೇ ನಡೆಸುವಂತೆ ಸೂಚಿಸಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತಾತ್ಮಕವಾಗಿ ಉಂಟಾಗಿರುವ ಲೋಪಗಳಿಗೆ ವಿದ್ಯಾರ್ಥಿಗಳನ್ನು ಬಲಿಪಶುಗಳನ್ನಾಗಿ ಮಾಡುತ್ತಿರುವುದು ಸರಿಯಲ್ಲ. ನಾವು ಮಂಡ್ಯ ವಿವಿಗೆ ವಿದ್ಯಾರ್ಥಿಗಳಾಗಿ ದಾಖಲಾಗಿದ್ದೇವೆ. ಆದ್ದರಿಂದ ಅಲ್ಲಿಯೇ ಮುಂದುವರಿಯಬೇಕು. ಜತೆಗೆ ವಿವಿ ಶಿರೋನಾಮೆಯಲ್ಲಿಯೇ ಸಿ3 ಪರೀಕ್ಷೆಯನ್ನು ಬರೆಯಲು ಅನುಮತಿ ಕೊಡಬೇಕೆಂದು ಆಗ್ರಹಿಸಲಾಯಿತು.

ಮೂರ‌್ನಾಲ್ಕು ದಿನದಿಂದ ತರಗತಿ ಬಹಿಷ್ಕರಿಸಿ ಪ್ರತಿಭಟಿಸಲಾಗುತ್ತಿದೆ. ಆದರೆ, ನಮ್ಮ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕೆಲ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ರವಾನೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಾನು, ಸಿಂಧು, ಮಹೇಶ್, ಲಿಂಗೇಶ್, ಚಂದನ್, ಗುರುಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net