

ಗೌರಿಬಿದನೂರು : ಆಂಧ್ರದ ಗಡಿಗೆ ಹೊಂದಿರುವ ಗಡಿನಾಡಿಗರು ಕನ್ನಡ ನಾಡು ನುಡಿ ಮೇಲೆ ಹೊಂದಿರುವ ಪ್ರೇಮ ಅನನ್ಯವಾದದ್ದು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಡಾ.ಎಚ್.ಎನ್ ಕಲಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಡಿನಾಡು ಕಲಾ ಉತ್ಸವ ಉದ್ಘಾಟಿಸಿ ಮಾತನಾಡಿದರು. ಅಚ್ಚ ಕನ್ನಡದ ಪ್ರದೇಶಗಳಾದ ಮಂಡ್ಯ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಂತೆ ಗಡಿನಾಡು ಕನ್ನಡಿಗರ ಪ್ರೇಮವನ್ನು ಕಂಡು ಬೆರಗಾಗಿದ್ದೇನೆ. ನಾಡು ನುಡಿ ವಿಷಯ ಬಂದಾಗ ಎಲ್ಲರೂ ಒಗ್ಗೂಡಿ ಧ್ವನಿಯೆತ್ತುತ್ತಾರೆ. ಈ ರೀತಿಯ ಪ್ರೇಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಭಾಷೆ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಗಡಿನಾಡ ಅಭಿವೃದ್ಧಿಗೆ ಎಲ್ಲ ಸರ್ಕಾರಗಳು ಆಸಕ್ತಿ ತೋರಬೇಕು. ಗಡಿನಾಡಿನಲ್ಲಿ ಕನ್ನಡಪರ ಕೆಲಸಗಳಿಗೆ ಸಹಕಾರ ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಧಿಕಾರದ ಅಧ್ಯ ಸೋಮಣ್ಣ ಬೇವಿನ ಮರದ, ಗಡಿಯೊಳಗೆ ಹಾಗೂ ಹೊರಗೆ ಕನ್ನಡ ಬೆಳೆಸುವ ಹಾಗೂ ಕನ್ನಡಿಗರ ಕಷ್ಟಗಳನ್ನು ಕೇಳುವ ಕೆಲಸವನ್ನು ಪ್ರಾಧಿಕಾರ ಮಾಡುತ್ತಿದೆ. ಸ್ಥಳಿಯವಾಗಿ ಕನ್ನಡದ ಭಾಷೆ, ಕಲೆ ರಕ್ಷಣೆಗಾಗಿ ಶ್ರಮಿಸುವವರನ್ನು ಗೌರವಿಸುತ್ತಿದೆ. ಸರ್ಕಾರ ಕೂಡ ಗಡಿನಾಡ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತಿದೆ ಎಂದರು.
ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಗಾಯನ ಹಾಗೂ ಜಾನಪದ ಕಲಾ ಪ್ರದರ್ಶನಗಳು ಸಭಿಕರಿಗೆ ರಸದೌತಣ ಉಣಬಡಿಸಿದವು. ವಿ.ರಾಮಚಂದ್ರ ಮತ್ತು ಸಂಗಡಿಗರಿಂದ ಜನಪದ ಗಾಯನ, ವಿದುಷಿ ಗೀತಾ ಆರ್.ಹೆಗಡೆ ದಾಸರಪದ, ಜಿ.ಎನ್.ದಿವ್ಯಾ ತಂಡದ ಭರತನಾಟ್ಯ ಸಮೂಹ ನೃತ್ಯ, ರೋಜಮ್ಮ ಮತ್ತು ತಂಡದಿಂದ ಕೊರವಂಜಿ ನೃತ್ಯ, ಗ್ರಾಮೀಣ ಯುವಕರ ಸಂದ ವತಿಯಿಂದ ಗೊರವರ ಕುಣಿತ, ವೆಂಕಟರೋಣಪ್ಪ ಮತ್ತು ತಂಡದಿಂದ ಸಮೂಹ ತಮಟೆ ವಾದನ, ಹನುಮಂತಯ್ಯ ಮತ್ತು ಸಂಗಡಿಗರಿಂದ ಸೋಮನ ಕುಣಿತ ಸೇರಿದಂತೆ ವಿವಿಧ ಕಲೆಗಳ ಪ್ರದರ್ಶನ ನಡೆಯಿತು.
ವಿಚಾರಗೋಷ್ಠಿ & ಚಿಂತನ ಮಂಥನ : ಉತ್ಸವದಲ್ಲಿ ನ್ಯಾಷನಲ್ ಕಾಲೇಜು ಪ್ರಾಚಾಯೆರ್ ಡಾ. ಶೈಲಜಾ ಸಪ್ತಗಿರಿ & ಗಡಿನಾಡಲ್ಲಿ ಕನ್ನಡ ಭಾಷೆ ಬಳಕೆ, ತೀರ್ಥ ಶಾಲೆ ಅಧ್ಯ ಡಾ.ಕೆ.ವಿ.ಪ್ರಕಾಶ್ & ಗಡಿನಾಡಲ್ಲಿ ಸಂಸತಿ ಮತ್ತು ಬೆಳವಣಿಗೆ ಮತ್ತು ಪೊ. ಎಸ್.ಜಿ. ಸಿದ್ದರಾಮಯ್ಯ ಅವರಿಂದ ಗಡಿ ಸ್ಥಿತಿಗತಿಗಳು ಕುರಿತು ವಿಚಾರಗೋಷ್ಠಿಗಳು ನಡೆದವು. ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯ ದಸ್ತಗಿರ್ ಸಾಬ್ ಅಧ್ಯತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸರ್ವಮಂಗಳಾ ಜೈರಾಮ್, ಅನ್ಸರಿ ಮೊಯಿನ್, ಸುಬ್ಬರಾಯಪ್ಪ, ಆನೂಡಿ ನಾಗರಾಜ್, ನರಸಿಂಹಮೂರ್ತಿ ಕವನ ವಾಚಿಸಿದರು.
ಶತಕಂಠ ಗಾಯನ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆಸಿದ ಶತಕಂಠಗಳ ಜನಪದ ಸಮೂಹ ಗಾಯನ ಪ್ರಯೋಗ ಸಭಿಕರ ಗಮನ ಸೆಳೆಯಿತು. ಡಾ.ಬಂಡ್ಲಹಳ್ಳಿ ವಿಜಯಕುಮಾರ್ ತರಬೇತಿ ಹಾಗೂ ನಿರ್ದೇಶನದಲ್ಲಿ ಜಾನಪದ ಝೇಂಕಾರ ಹೆಸರಿನಲ್ಲಿ ಸಮೂಹ ಗಾಯನ ಪ್ರಸ್ತುತ ಪಡಿಸಲಾಯಿತು.
ಗಡಿ ಎಂದರೆ ಬೆಳಗಾವಿ ಮಾತ್ರವಲ್ಲ : ಪ್ರಾಧಿಕಾರದ ಸದಸ್ಯ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಗಡಿನಾಡ ಕಲಾವಿದರ ಕಲೆ ಪ್ರದರ್ಶನ ಹಾಗೂ ಅವರ ಪ್ರಗತಿಗೆ ಗಡಿನಾಡು ಉತ್ಸವ ಪೂರಕವಾಗಿದೆ. ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ, ಪ್ರಾಧಿಕಾರದಿಂದ ಗಡಿನಾಡ ಶಾಲೆಗಳು, ರಸ್ತೆಗಳ ಅಭಿವೃದ್ಧಿ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲು ಸರ್ಕಾರ ಮುಂದಾಗಬೇಕು. ಗಡಿನಾಡಲ್ಲಿ ಗುಡಿ ಕೈಗಾರಿಕೆಗಳು ಸೃಷ್ಟಿಯಾಗಿ ಉದ್ಯೋಗಾವಕಾಶಗಳು ದೊರೆತಲ್ಲಿ ಜನ ನಗರಗಳತ್ತ ವಲಸೆ ಹೋಗುವುದು ತಪ್ಪಲಿದೆ. ಇದರಿಂದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಾಣಲಿವೆ. ಗಡಿ ಎಂದರೆ ಕೇವಲ ಬೆಳಗಾವಿ ಮಾತ್ರವಲ್ಲ. ತಮಿಳುನಾಡು ಹಾಗೂ ಆಂಧ್ರ ಪ್ರದೇಶದೊಂದಿಗೂ ಕೂಡ ಹೆಚ್ಚಿನ ಗಡಿ ಭಾಗವನ್ನು ಕರ್ನಾಟಕ ಹಂಚಿಕೊಂಡಿದೆ. ಈ ಭಾಗಗಳನ್ನೂ ಅಭಿವೃದ್ಧಿಪಡಿಸಬೇಕು ಎಂದರು.