ಮರೆಯಲಾಗದ ಮಾಣಿಕ್ಯ ಸಿದ್ಧೇಶ್ವರ ಶ್ರೀ; ಎ.ಎಸ್. ಆನಂದ

KRUSHI GHOSHTI IN ASHRAMA
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಗುರುನಮನ ಕಾರ್ಯಕ್ರಮ ಹಿನ್ನೆಲೆ ನಡೆದ ಸುಧಾರಿತ ಕೃಷಿ ಪದ್ಧತಿ ಎಂಬ ಗೋಷ್ಠಿಯನ್ನು ವಿವಿಧ ರೈತರು ಉದ್ಘಾಟಿಸಿದರು. ಸಾವಯವ ಕೃಷಿ ನಿಯೋಗದ ಅಧ್ಯಕ್ಷ ಎ.ಎಸ್. ಆನಂದ, ವಿಜುಗೌಡ ಪಾಟೀಲ, ಮಹಾದೇವ ಶಿವಾಚಾರ್ಯರು ಮತ್ತಿತರರಿದ್ದಾರೆ.
Published on

ವಿಜಯಪುರ: ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮರೆಯಲಾಗದ ಮಾಣಿಕ್ಯ. ಅವರು ಪ್ರತಿ ಕ್ಷಣವೂ ನಮ್ಮ ನೆನೆಪಿನಲ್ಲಿಯೇ ಇರುತ್ತಾರೆ. ಅವರು ತೋರಿಸಿದ ದಾರಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಸಾರ್ಥಕದ ಜೀವನ ನಡೆಸಬೇಕು ಎಂದು ಸಾವಯವ ಕೃಷಿ ನಿಯೋಗದ ಅಧ್ಯಕ್ಷ ಎ.ಎಸ್. ಆನಂದ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯ 2ನೇ ವರ್ಷದ ಗುರು ನಮನ ಕಾರ್ಯಕ್ರಮದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ‘ಸುಧಾರಿತ ಕೃಷಿ ಪದ್ಧತಿ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶ್ರೀ ಸಿದ್ಧೇಶ್ವರ ಅಪ್ಪಾಜಿ ಇದ್ದಾಗ ಅವರನ್ನು ಭೇಟಿ ಮಾಡಲು ಅವರ ಮಾತುಗಳನ್ನು ಕೇಳಲು ಮೌನವಾಗಿರುತ್ತಿದ್ದೆವು. ಆದರೆ ಇಂದು ಅವರು ಇಲ್ಲದಾಗ ಅದೇ ಮೌನವನ್ನು ಮುರಿದು ಅವರ ಬಗ್ಗೆಯೇ ಮಾತನಾಡಬೇಕಾದ ಅನಿವಾರ್ಯತೆ ಬಂದಿದೆ. ಅವರು ಇಲ್ಲ ಎಂಬ ಮಾತು ನಂಬಲಸಾಧ್ಯ. ಅವರು ನಮ್ಮ ಸುತ್ತ-ಮುತ್ತ ಇದ್ದಾರೆ, ನಮ್ಮ ಮಾತುಗಳನ್ನು ಆಲಿಸುತ್ತಿದ್ದಾರೆಂಬ ಭಾವ ಅಡಗಿದೆ ಎಂದರು.

ಪೂಜ್ಯರು ಕೃಷಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಾವಯವ ಕೃಷಿಯ ಬಗ್ಗೆ ಸಾಕಷ್ಟು ಅರಿವು ಮೂಡಿಸುತ್ತಿದ್ದರು. ನಾವೆಲ್ಲರೂ ಸಾವಯವ ಕೃಷಿಯ ಮಹತ್ವದ ಬಗ್ಗೆ ಅರಿಯಬೇಕಾಗಿದೆ. ರೈತರು ರಾಸಾಯನಿಕ ಗೊಬ್ಬರವನ್ನು ನಮ್ಮ ಭೂಮಿಗೆ ಹಾಕುವುದರಿಂದ ಅದರಿಂದ ಆಗುವ ನಷ್ಟದ ಬಗ್ಗೆ ಅರಿಯಬೇಕಾಗಿದೆ. ಕೃಷಿ ಬರೀ ಲಾಭದಾಯಕ ಉದ್ಯೋಗವಾದ ಪರಿಣಾಮ ಇಂದಿನ ದಿನ ನಮಗೆ ಅನ್ನ ನೀಡುವ ಭೂಮಿಗೆ, ಹಾಲು ಕೊಡುವ ಗೋವಿಗೆ, ನಮ್ಮ ಮಕ್ಕಳಿಗೂ, ನಮ್ಮ ಕುಟುಂಬಗಳಿಗೂ ವಿಷಪೂರಿತ ಆಹಾರವನ್ನು ನೀಡುತ್ತಿರುವುದು ದುರಂತದ ವಿಷಯ ಎಂದರು.

ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ನಡೆದಾಡುವ ದೇವರೆಂದೇ ಖ್ಯಾತರಾದವರು ಸಿದ್ಧೇಶ್ವರ ಸ್ವಾಮೀಜಿ. ಅವರು ಬದುಕಿರುವ ಕಾಲಘಟ್ಟದಲ್ಲಿ ನಾವಿದ್ದೆವು ಎಂಬುದೇ ನಮ್ಮ ಪುಣ್ಯ ಎಂದರು.

ಬಬಲೇಶ್ವರದ ಪಂಚಮಸಾಲಿ ಪೀಠದ ಜಗದ್ಗುರು ಪೂಜ್ಯ ಶ್ರೀ ಮಹಾದೇವ ಶಿವಾಚಾರ್ಯರು ಆಶೀರ್ವಚನ ನೀಡುತ್ತ, ಮಲ್ಲಿಕಾರ್ಜುನ ಅಪ್ಪಾಜಿಯವರು ವೇದಾಂತ ಕೇಸರಿ ಎಂಬ ಬಿರುದು ಸುಮ್ಮನೆ ಪಡೆದಿಲ್ಲ. ಪ್ರತಿ ದಿನವೂ ಸತತ ಮೂರು ಹೊತ್ತುಗಳ ಕಾಲ ಇಡೀ ಭಕ್ತಕುಲಕ್ಕೆ ಪ್ರವಚನ ನೀಡಿದಂತವರು ಸ್ವಾಮೀಜಿಯವರು. ಅವರ ಶಿಷ್ಯರಾಗಿ ಇಡೀ ಪ್ರಪಂಚದಾದ್ಯಂತ ಇಂಗ್ಲೀಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಜ್ಞಾನದಾಸೋಹ ಮಾಡಿದಂತವರು ಸಿದ್ಧೇಶ್ವರ ಅಪ್ಪಾಜಿಯವರು. ಅವರ ಬಗ್ಗೆ ಮಾತನಾಡುವುದೇ ನಮ್ಮ ಪುಣ್ಯ ಎಂದರು.

ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಗತಿಪರ ಸಾವಯವ ಕೃಷಿಕ ಧರೆಪ್ಪ ಕಿತ್ತೂರ, ರಾಜಶೇಖರ ನಿಂಬರಗಿ ಮಾತನಾಡಿದರು.

ಸುಭಾಷ ಕನ್ನೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಜಂಬುನಾಥ ಕಂಚ್ಯಾಣಿ ಸ್ವಾಗತಿಸಿದರು. ಶಿಕ್ಷಕ ಅಶೋಕ ಹಂಚಲಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net