

ಮೂಗೂರು: ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯ ಹಾಗೂ ಶ್ರೀ ದೇಶೇಶ್ವರಸ್ವಾಮಿ ದೇಗುಲದ ಗೋಡೆಗಳಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಗೋಡೆಗಳು ಬಿರುಕುಬಿಟ್ಟು ಶಿಥಿಲಾವಸ್ಥೆಗೆ ತಲುಪಿದೆ.
ಗ್ರಾಮದ ಈ 2 ಅತ್ಯಂತ ಹಳೆಯ ದೇವಾಲಯಗಳು ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿದ್ದು 2-3 ವರ್ಷಗಳ ಹಿಂದಷ್ಟೇ ಕೋಟ್ಯಂತರ ರೂ. ವ್ಯಯಿಸಿ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯಕ್ಕೆ ರಾಜಗೋಪುರ ನಿರ್ಮಾಣ ಮಾಡಿ ಸಮರ್ಪಣೆ ಮಾಡಲಾಗಿದೆ. ಇಲಾಖೆಯ ಅಧಿಕಾರಿಗಳ ನಿರ್ಲಕ್ಷೃದಿಂದ ನಿರ್ವಹಣೆ ಕೊರತೆಯಿಂದ ದೇಗುಲದ ಕೆಲವು ಕಡೆಗಳಲ್ಲಿ ಗಿಡಗಂಟಿಗಳು ಬೆಳೆದು ಗೋಡೆಗಳು ತೇವಾಂಶದಿಂದ ಶಿಥಿಲಾವಸ್ಥೆಗೆ ತಲುಪಿವೆ. ದೇವಾಲಯದ ಆದಾಯ ಸರ್ಕಾರದ ಖಜಾನೆ ಸೇರುತ್ತಿದೆ. ಅದರೆ ದೇವಾಲಯಕ್ಕೆ ಮೂಲಸೌಕರ್ಯ ಮಾತ್ರ ಮರೀಚಿಕೆಯಾಗಿದೆ.
ತ್ರಿಪುರ ಸುಂದರಿ ಅಮ್ಮನವರ ಸೇವಾ ಸಮಿತಿ ವತಿಯಿಂದ ಶ್ರೀ ದೇಶೇಶ್ವರಸ್ವಾಮಿ ದೇಗುಲದ ರಾಜಗೋಪುರಕ್ಕೆ ಕಲಶ ಪ್ರತಿಷ್ಠಾಪನೆ ವೇಳೆ ಗೋಪುರ ಹಾಗೂ ದೇವಾಲಯದಲ್ಲಿ ಬೆಳೆದ ಗಿಡಗಳನ್ನು ತೆರವುಗೊಳಿಸಿ ಸುಣ್ಣಬಣ್ಣ ಬಳಿದು ಸಿಂಗರಿಸಲಾಗಿತ್ತು. ನಂತರದ ದಿನಗಳಲ್ಲಿ ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸದ ಹಿನ್ನೆಲೆಯಲ್ಲಿ ರಾಜಗೋಪುರದಲ್ಲಿ ಬೃಹತ್ ಗಾತ್ರದಲ್ಲಿ ಗಿಡಗಳು ಬೆಳೆದು ಬೇರು ಬಿಟ್ಟಿವೆ.
ಇದರಿಂದ ಪುರಾತನ ಕಾಲದ ಗೋಪುರದಲ್ಲಿ ಬಿರುಕುಗಳು ಸೃಷ್ಟಿಯಾಗಿ ಶ್ರೀ ದೇಶೇಶ್ವರಸ್ವಾಮಿ ದೇವಸ್ಥಾನದ ರಾಜಗೋಪುರ ಅವನತಿಯತ್ತ ಸಾಗುತ್ತಿದೆ. ದಿನೇ ದಿನೇ ದೇಗುಲದ ಸ್ಥಳಗಳು ಒತ್ತುವರಿಯಾಗುತ್ತಿದ್ದು, ಮಳೆಯಿಂದ ಕುಸಿದು ಬಿದ್ದ ಗೋಡೆಯ ದುರಸ್ತಿಗೆ ಮುಂದಾಗದಿರುವುದಕ್ಕೆ ಸ್ಥಳೀಯರು ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.