

ವಿರಾಜಪೇಟೆ: ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ. ಶೈಕ್ಷಣಿಕ ಸಾಧನೆಯತ್ತಲೂ ಹೆಚ್ಚು ಸಾಗಬೇಕಾಗಿದೆ. ಆಗ ಮಾತ್ರ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯ ಪ್ರಶ್ನಿಸಲು ಸಾಧ್ಯ ಎಂದು ದುಡಿಯುವ ಮಹಿಳೆಯರ ರಾಜ್ಯ ಸಂಚಾಲಕಿ ಎಚ್.ಎಸ್. ಸುನಂದಾ ಅಭಿಪ್ರಾಯಪಟ್ಟರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿಯಿಂದ ವಿರಾಜಪೇಟೆ ಶಾಖೆಯ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದುಡಿಯುವ ಮಹಿಳೆಯರ ಕೊಡಗು ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಹೆಣ್ಣು ಮನೆ ಕೆಲಸಕ್ಕಷ್ಟೇ ಮೀಸಲಾಗಿಲ್ಲ. ಅದರೊಂದಿಗೆ ವಿವಿಧ ಸ್ಥಳಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತನ್ನ ಕೊಡುಗೆಗಳನ್ನು ನೀಡುತ್ತಿದ್ದಾಳೆ. ದೇಶದ ರಾಷ್ಟ್ರಾಧ್ಯಕ್ಷರಿಂದ ವ್ಯೋಮಕ್ಕೆ ಜಿಗಿದು ವಾಪಸ್ ಬಂದ ಆ ಹೆಣ್ಣುಮಗಳ ತನಕವೂ ಎಲ್ಲರೂ ದುಡಿಯುವ ಮಹಿಳೆಯರೇ ಆಗಿದ್ದಾರೆ ಎಂದು ಅವರು, ದುಡಿಯುವ ಸ್ಥಳಗಳಲ್ಲಿ ಉಸಿರುಗಟ್ಟಿಸುವ ವಾತಾವರಣ ಖಂಡಿಸಿ, ದುಡಿಮೆಯ ಕಾಲಾವಧಿ ದಿನಕ್ಕೆ 8 ಗಂಟೆಗೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ದೇಶದ ಸಂವಿಧಾನ, ಕಾನೂನು, ಕೋರ್ಟ್ ತೀರ್ಪುಗಳು ಇದ್ದಾಗ್ಯೂ ಪ್ರಭುತ್ವವೇ ನಿಂತು ಮಹಿಳಾ ಶ್ರಮ ಶಕ್ತಿಗೆ ಮೌಲ್ಯ ಕಟ್ಟಿಕೊಡುತ್ತಿಲ್ಲ. ಹೆಣ್ಣುಮಕ್ಕಳಿಗೆ ಅಪಾಯಕಾರಿ ಸ್ಥಳಗಳಲ್ಲಿ ರಾತ್ರಿಪಾಳಿ ಕೆಲಸ ಮಾಡಿಸಲಾಗುತ್ತಿದೆ. ಕಾರ್ಮಿಕ ಕಾಯ್ದೆಗಳನ್ನೆಲ್ಲ ತೆಗೆದು ಕಾರ್ಮಿಕ ಸಂಹಿತೆಗಳನ್ನಾಗಿ ಮಾಡಿ ಹಕ್ಕುಗಳನ್ನೆಲ್ಲ ಕಸಿದು ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಬಲಿ ಕೊಡಲಾಗುತ್ತಿದೆ. ಮಹಿಳೆಯರ ಜೀವಕ್ಕೆ ಬೆಲೆ ಕೊಡದ ಸಮಾಜವನ್ನು ಎದುರು ಹಾಕಿಕೊಂಡು ಸಮಾನತೆಯ ಆಶಯಗಳ ಈಡೇರಿಕೆಗೆ ಹೋರಾಡುತ್ತಲೇ ನಮ್ಮ ತನವನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಸಿಐಟಿಯುನ ಜಿಲ್ಲಾ ಅಧ್ಯಕ್ಷ ಪಿ.ಆರ್.ಭರತ್ ಮಾತನಾಡಿ ದುಡಿಯುವ ಮಹಿಳೆ ಎಂದರೆ ಯಾರು?, ಯಾಕೆ ಮಹಿಳೆಯರ ದುಡಿಮೆಯನ್ನು ಪ್ರಗತಿಯ ಮಾನದಂಡದಲ್ಲಿ ಪರಿಗಣಿಸುತ್ತಿಲ್ಲ. ಮಹಿಳೆಯರ ದುಡಿಮೆ, ಶ್ರಮ ಪರಿಗಣನೆ ಆಗುತ್ತಿಲ್ಲ. ಕೆಲಸ ಮಾಡುವ ವಿಭಿನ್ನ ವಲಯಗಳಾದ ಉತ್ಪಾದನೆ, ಕೃಷಿ, ಸೇವಾ ವಲಯಗಳಲ್ಲಿ ಮಹಿಳಾ ಶ್ರಮ ಶಕ್ತಿಗೆ ಅನೇಕ ಅಡೆತಡೆಗಳಿವೆ. ಇವೇ ತಾರತಮ್ಯಗಳು ಮತ್ತು ಅವುಗಳೇ ದೌರ್ಜನ್ಯಕ್ಕೂ ಕಾರಣಗಳಾಗಿವೆ ಎಂದರು.
ಉದ್ಯೋಗ ರಕ್ಷಣೆ ಇಲ್ಲದಿರುವುದು, ಸಾಮಾಜಿಕ ಸುರಕ್ಷೆ, ಹೆರಿಗೆ ಸೌಲಭ್ಯದಿಂದ ವಂಚಿಸುತ್ತಿರುವುದು ಹೀಗೆ ಇವೆಲ್ಲ ಮಹಿಳಾ ಶ್ರಮ ಶಕ್ತಿಗೆ ಇರುವ ಅಡೆತಡೆಗಳು. ಇಡೀ ಸಮಾಜದ ಬದಲಾವಣೆಗೆ ಪ್ರಜ್ಞಾಪೂರ್ವಕ ಹೋರಾಟ ಮಾಡದೇ ಪ್ರತ್ಯೇಕವಾಗಿ ಮಹಿಳೆಯರ ಮೇಲಿನ ಯಾವುದೇ ಸ್ವರೂಪದ ದಾಳಿ, ದಬ್ಬಾಳಿಕೆ, ದೌರ್ಜನ್ಯ, ತಾರತಮ್ಯ ನಿವಾರಿಸಲು, ಶೋಷಣೆ ಹೋಗಲಾಡಿಸಲು, ಸಮಾನತೆಯ ಆಶಯ ಸಾಕಾರಗೊಂಡಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ನಿರಂತರ ಹೋರಾಟ ನಡೆಸುತ್ತಾ ಬಂದಿದೆ ಎಂದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುಮಿತ್ರಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಡಿಯುವ ಮಹಿಳೆಯರ ಗೋಳು ಒಂದೆರಡಲ್ಲ. ಒಟ್ಟಾರೆ ಸಂಘಟಿತ, ಅಸಂಘಟಿತ ವಲಯ, ಸೇವಾ ವಲಯಗಳ ಕೆಲಸಗಳಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ದುಡಿಮೆಯಲ್ಲಿ ಕಾಯಂ ಸ್ವರೂಪದ, ಕನಿಷ್ಟ ಕೂಲಿ ಕಾನೂನಿನಡಿ ಬರುವ, ಕೆಲಸದ ಭದ್ರತೆ, ವೇತನ, ಪಿಂಚಣಿ, ರಜೆ ಸೌಲಭ್ಯ ಸರಿಯಾಗಿ ದೊರೆಯಬೇಕು . ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಹಕ್ಕುಗಳ ರಕ್ಷಣೆಗೆ ಇರುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ, ಬಿಸಿಯೂಟ ನೌಕರರ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಸುಮಾ, ಆದಿವಾಸಿ ಸಂಘಟನೆಯ ಜಿಲ್ಲಾ ಮುಖಂಡರಾದ ಪ್ರೇಮಾ, ಕಾಫಿ ಕ್ಯೂರಿಂಗ್ ವರ್ಕ್ಸ್ ಜಿಲ್ಲಾಧ್ಯಕ್ಷ ಮಂಜು ಹಾಗೂ ಮುಖಂಡರಾದ ಪುಷ್ಪಾ ಇತರರು ಇದ್ದರು.