ಸುಭದ್ರ ರಾಷ್ಟ್ರ ನಿರ್ವಣವೇ ಪರಮೋಚ್ಛ ಗುರಿ

16 KMT 2
Published on

ಕುಮಟಾ: ಭಾರತೀಯ ಸೇನೆಯ ಉದ್ದೇಶ ಹಾಗೂ ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತಕ್ಕೂ ಏನೂ ವ್ಯತ್ಯಾಸವಿಲ್ಲ. ಸುಭದ್ರ ರಾಷ್ಟ್ರ ನಿರ್ವಣದ ಪುಣ್ಯಕಾರ್ಯವೇ ನಮ್ಮೆಲ್ಲರ ಪರಮೋಚ್ಛ ಗುರಿಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ ಕಾರ್ಣಿಕ ಹೇಳಿದರು.

ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಕುಮಟಾ ಮಂಡಲದ ಸಂಘಟನಾ ಪರ್ವ 2024 ರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪಕ್ಷದ ಉದ್ದೇಶವನ್ನು ಸದೃಢಗೊಳಿಸಲು ಮತ್ತು ಪಕ್ಷ ಸಂಘಟಿಸಲು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇತರ ಪಕ್ಷಗಳಲ್ಲಿ ಹುದ್ದೆ, ಅಧಿಕಾರ, ಯಾವುದೋ ಲಾಭಕ್ಕಾಗಿ ಕೆಲಸ ಮಾಡುವವರು ಕಂಡುಬರುತ್ತಾರೆ. ಆದರೆ, ಬಿಜೆಪಿಯಲ್ಲಿ ಸ್ವಾರ್ಥ ರಹಿತವಾಗಿ ಪಕ್ಷಕ್ಕಿಂತ ದೇಶ, ರಾಷ್ಟ್ರೀಯತೆ ಮುಖ್ಯ ಎಂಬ ಧ್ಯೇಯದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಪ್ರಧಾನಿ ಮೋದಿ ಅವರು ಬಂದ ಮೇಲೆ ಅತಿ ಹೆಚ್ಚು ಅಭಿವೃದ್ಧಿ, ಭ್ರಷ್ಟಾಚಾರ ನಿಯಂತ್ರಣವಾಗಿದ್ದರೂ ನಾವು ಸರಿಯಾದ ಪ್ರಚಾರದ ಕೊರತೆ ಹಾಗೂ ವಿರೋಧ ಪಕ್ಷಗಳ ಅತಿಯಾದ ಅಪಪ್ರಚಾರದ ಕಾರಣಕ್ಕೆ ರಾಜ್ಯದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಈ ಬಗ್ಗೆ ಗಮನಹರಿಸಬೇಕಾದ ಅಗತ್ಯ ಕಂಡುಬರುತ್ತಿದೆ ಎಂದರು.

ಸಭೆಯಲ್ಲಿ ಬಿಜೆಪಿಯ ರಾಜಕೀಯ ಇತಿಹಾಸ, ಸಾಧನೆಗಳು ಮತ್ತು ಮುಂದಿನ ಸ್ಪರ್ಧೆಗಳ ಕುರಿತು ಪ್ರಮುಖ ಆಲೋಚನೆಗಳನ್ನು ಹಂಚಿಕೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ಗುನಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಗುರುಪ್ರಸಾದ ಹೆಗಡೆ, ರಾಜ್ಯ ಸಹ ಸಂಚಾಲಕ ಎಂ.ಜಿ. ಭಟ್, ಜಿಲ್ಲಾ ಸಂಘಟನಾಧಿಕಾರಿ ಗೋವಿಂದ ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net