ಯುವಕನ ಹತ್ಯೆ ಮಾಡಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ

syed ershad and mahammad noushad
ಸೈಯದ್ ಇಸಾಕ್ ಮತ್ತು ಮೊಹಮ್ಮದ್ ನೌಷಾದ್
Published on

ಶಿವಮೊಗ್ಗ: ಮದ್ಯ ಸೇವಿಸಿ ಚಾಕುವಿನಿಂದ ಇರಿದು ಯುವಕನ ಹತ್ಯೆ ಮಾಡಿದ್ದ ಇಬ್ಬರಿಗೆ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಶಿಕಾರಿಪುರ ಪಟ್ಟಣದ ಆಶ್ರಯ ಬಡಾವಣೆಯ ಸೈಯದ್ ಇಸಾಕ್ (20) ಮತ್ತು ಮೊಹಮ್ಮದ್ ನೌಷಾದ್ (21) ಬಂಧಿತರು. 2021ರ ಜ.1ರಂದು ರಾತ್ರಿ ಶಿಕಾರಿಪುರದ ಆಶ್ರಯ ಬಡಾವಣೆಯ ಅಂಡಗಿ ಮುಂದೆ ಮದ್ಯ ಸೇವಿಸಿ ಕೂಗಾಡುತ್ತಿದ್ದು ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅದೇ ಬಡಾವಣೆಯ ಮನೋಜ್ (20) ಎಂಬಾತನ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.
ಈ ಬಗ್ಗೆ ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರು ತನಿಖೆ ಕೈಗೊಂಡು ಇಬ್ಬರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅವರು ಆರೋಪ ಸಾಬೀತಾಗಿದ್ದರಿಂದ ಇಸಾಕ್ ಮತ್ತು ನೌಷಾದ್‌ಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಪುಷ್ಪಾ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net