

ಹುಬ್ಬಳ್ಳಿ: ಇಲ್ಲಿನ ಆನಂದನಗರದ ಘೊಡ್ಕೆ ಪ್ಲಾಟ್ನ ಟಾವರ್ ಮೇಲೆ ಎರಡು ಧರ್ಮದ ಧ್ವಜ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ.
ಸೈಯದ್ಅಲಿ ನಾಗನೂರ, ರವಿ ನಾಗರಾಜ ಕಾನನಾ ಬಂಧಿತರು. ಇದಕ್ಕೂ ಮೊದಲು ವಿಚಾರಣೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದ ತಂಡ ವಿಧವಿಧವಾಗಿ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಟಾವರ್ ಮೇಲೆ ಪಾರಿವಾಳ ಕೂಡದಿರಲು ಧ್ವಜ ಕಟ್ಟಿರುವುದಾಗಿ ಬಂಧಿತರು ಹೇಳುತ್ತಿದ್ದಾರೆ ಎನ್ನಲಾಗಿದೆ.
ಏನಾಗಿತ್ತು?: ಇಲ್ಲಿನ ಹಳೇ ಹುಬ್ಬಳ್ಳಿ ಆನಂದನಗರ ಘೊಡ್ಕೆ ಪ್ಲಾಟ್ನ ಮೊಬೈಲ್ ಟಾವರ್ ಮೇಲೆ ಕೆಲ ಕಿಡಿಗೇಡಿಗಳು ಮಂಗಳವಾರ ಎರಡೂ ಧರ್ಮದ ಧ್ವಜಗಳನ್ನು ಕಟ್ಟಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಹಿಂದು ಜಾಗರಣ ವೇದಿಕೆ ಮಹಾನಗರ ಘಟಕದ ಪದಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಧ್ವಜ ತೆರವುಗೊಳಿಸಿದ್ದರು. ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದರು. ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದರು.