

ಮೈಸೂರು: ಎರಡೆಂಬತ್ತು ಕೋಟಿಯಷ್ಟು ಇದ್ದ ವಚನಗಳು ಇಂದು ಕ್ಷೀಣಿಸುತ್ತಿದ್ದು, ಸರ್ಕಾರ ಕೇವಲ ಎರಡು ಪುಸ್ತಕಕ್ಕೆ ಇಳಿಸಿದೆ ಎಂದು ನಗರದ ನೀಲಕಂಠಸ್ವಾಮಿ ಮಠದ ಶ್ರೀಸಿದ್ದಮಲ್ಲ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದಿಂದ ಗೌರಿಶಂಕರನಗರದ ಪಂಚಗವಿ ಮಠದ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಬಸವಾದಿ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಕೊಂಡರೆ ಸುಖ ಶಾಂತಿಯಿಂದ ಬಾಳಬಹುದು. ಅದಕ್ಕಾಗಿ ನಮ್ಮ ಶರಣರು ವಚನಗಳ ಮೂಲಕ ಜೀವನದ ಪಾಠ ಹೇಳಿಕೊಟ್ಟಿದ್ದರು ಎಂದರು.
ಶರಣರೇ ಹೇಳಿದಂತೆ ಅಂದು ಎರಡೆಂಬತ್ತು ಕೋಟಿ ವಚನಗಳಿದ್ದವು. ಆದರೆ, ಇಂದು ವಚನಗಳು ಸರ್ಕಾರ ಮುದ್ರಿಸಿದ ಎರಡು ಪುಸ್ತಕಗಳಿಗೆ ಸೀಮೀತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲ್ಯಾಣದ ಕ್ರಾಂತಿ ಬಳಿಕ ಹಲವು ವಚನಗಳನ್ನು ಸೈನಿಕರು ಸುಟ್ಟುಹಾಕಿದರು. ಇವತ್ತು ಲಿಂಗವಂತರು ಕೂಡ ವಚನಗಳನ್ನು ಮರೆತುಬಿಟ್ಟಿದ್ದೇವೆ. ಇದರಿಂದ ವಚನಗಳ ಕೊಂಡಿ ಕಳಚಿ ಹೋಗಿಬಿಟ್ಟಿದೆ ಎಂದು ವಿಷಾಧಿಸಿದರು.
ಜೀವನ ಸಾರ ತಿಳಿಯಲು ಇಂದು ಎಲ್ಲರೂ ವಚನಗಳನ್ನು ಮತ್ತೆ ಮನನ ಮಾಡಬೇಕಿದೆ. ಬಸವಣ್ಣನವರು ಕೊಟ್ಟ ಸಪ್ತ ಸೂತ್ರಗಳನ್ನು ನಾವು ಅಳವಡಿಸಿಕೊಳ್ಳಬೇಕು. ಶರಣರ ನೈಜ ವಚನಗಳ ಸಂರಕ್ಷಣೆ ಮತ್ತು ಅಳವಡಿಕೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.
ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಮಹಿಳೆಯರು ಹಾಗೂ ಪುರುಷರನ್ನು ಸಮಾನತೆಯಿಂದ ಕಂಡರು. ಇದಕ್ಕೆ ನಾವು ಕೃತಜ್ಞತೆಯಿಂದ ಇರಬೇಕು ಎಂದರು.
ಭಾರತದಲ್ಲಿ ವೈಷ್ಣವ ಮತ್ತು ಶೈವ ಧರ್ಮ ಎಂಬುದಿತ್ತು. ವಿಷ್ಣುವನ್ನು ಪೂಜಿಸುವ ವೈಷ್ಣವರು, ಶಿವನನ್ನು ಪೂಜಿಸುವ ಶೈವರಿದ್ದರು. ಇಂಥ ಶೈವರಲ್ಲಿ ವೀರಶೈವ ಎಂಬ ಪದ ಹುಟ್ಟಿಕೊಂಡಿತು ಎಂದರು.
ಈ ರೀತಿ ಹುಟ್ಟಿದ ವೀರಶೈವ ಎಷ್ಟೇ ಪ್ರಯತ್ನಪಟ್ಟರೂ ಸ್ವತಂತ್ರ ಧರ್ಮವಾಗಲಿಲ್ಲ. ಜನ ಬುದ್ಧಿವಂತರಾಗಿದ್ದರೆ ಲಿಂಗಾಯತ ಧರ್ಮಕ್ಕಾದರೂ ಪ್ರೋತ್ಸಾಹ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಅಷ್ಠಾವರಣ ಹಾಗೂ ಪಂಚಾಚಾರಗಳ ಸ್ಥೂಲ ಪರಿಚುಂ ಮತ್ತು ಷಟ್‌ಸ್ಥಳ ಸಿದ್ಧಾಂತ ಕುರಿತು ಪಿ.ರುದ್ರಪ್ಪ, ಲಿಂಗಾಯತ ಧರ್ಮದ ಆಚರಣೆಗಳು ಹಾಗೂ ಸಂಸ್ಕಾರ, ಅಂತ್ಯಸಂಸ್ಕಾರ ಮತ್ತು ಸ್ಮರಣೋತ್ಸವ ಕುರಿತು ಎಂ.ಎಂ.ಸಂಗೊಳ್ಳಿ ಹಾಗೂ ಕಲ್ಯಾಣ ಮಹೋತ್ಸವದ ಚಿಂತನ ಹಾಗೂ ಕಾರ್ಯವಿಧಾನ, ಇತರೆ ಆಚರಣೆ ಮತ್ತು ಸಂಸ್ಕಾರ ಕುರಿತು ಎಸ್.ಎನ್.ಅರಭಾವಿ ಮಾತನಾಡಿದರು.
ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ, ಕುದೇರು ಮಠದ ಶ್ರೀಗುರುಶಾಂತ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಪ್ಪ, ಕಾರ್ಯದರ್ಶಿ ಬಿ.ಎಂ.ಮರಪ್ಪ ಇತರರು ಇದ್ದರು.