

ಕಾರವಾರ: ಜನ ಪ್ರತಿನಿಧಿ ಹಾಗೂ ಜನರ ಪ್ರತಿಭಟನೆಗೆ ಕೊನೆಗೂ ಜಿಲ್ಲಾಡಳಿತ ಮಣಿದಿದೆ. ತಾನು ವಿಧಿಸಿದ್ದ ನಿಯಮಾವಳಿಗಳಿಗೆ ರಾಜಿ ಮಾಡಿಕೊಂಡು ಸುರಂಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿದೆ. ರಾಷ್ಟ್ರೀಯ ಹೆದ್ದಾರಿ 66 ರ ಕಾರವಾರ-ಬಿಣಗಾ ನಡುವಿನ ನಾಲ್ಕೂ ಸುರಂಗಳು ವಾಹನ ಸಂಚಾರಕ್ಕೆ ಸೋಮವಾರ ಮುಕ್ತವಾಗಿವೆ. ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸೋಮವಾರ ತೆರವು ಮಾಡಿ ಆದೇಶ ಹೊರಡಿಸಿದ್ದಾರೆ.
ಬಿಣಗಾದಿಂದ ಬರುವ ಹಾಗೂ ಹೋಗುವ ಸುರಂಗಗಳಿಗೆ ಸುರಕ್ಷತಾ ಪ್ರಮಾಣಪತ್ರ ಇರಲಿಲ್ಲ ಎಂಬ ಕಾರಣ ನೀಡಿ ಜು.8 ರಂದು ಆಗಿನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ವಾಹನ ಸಂಚಾರ ನಿಷೇಧಿಸಿದ್ದರು. ಮೂರನೇ ಸಂಸ್ಥೆ(ಥರ್ಡ್ ಪಾರ್ಟಿ) ಪರಿಶೀಲನೆ ನಡೆಸಿ ಸುರಂಗ ಸುರಕ್ಷಿತವಾಗಿರುವ ಬಗ್ಗೆ ಭಾರತೀಯ ರಾಷ್ಟಿಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ವರದಿ ನೀಡಿದ ಬಳಿಕವಷ್ಟೇ ತೆರವು ಮಾಡಲಾಗುವುದು ಎಂದು ತಿಳಿಸಿದ್ದರು. ಇದರಿಂದ ಕಾರವಾರ-ಬಿಣಗಾ ನಡುವೆ ಅಂತರ 4 ಕಿಮೀ ಹೆಚ್ಚಿತ್ತು. ಅಪಘಾತಗಳು ಸಂಭವಿಸಲಾರಂಭಿಸಿದ್ದವು. 86 ದಿನಗಳಾದರೂ ಸುರಂಗದಲ್ಲಿ ವಾಹನ ಸಂಚಾರ ಇರಲಿಲ್ಲ.
ಇದನ್ನೂ ಓದಿ: ಎಎಂಎಲ್ ಸಿ ಉಳ್ವೇಕರ್ ವಶಕ್ಕೆ ಪಡೆದು ಬಿಡುಗಡೆ
ಪುಣೆಯ ತಜ್ಞರೊಬ್ಬರ ತಪಾಸಣಾ ವರದಿ ನೀಡಿ ಸುರಂಗ ತೆರವಿಗೆ ಎನ್‌ಎಚ್‌ಎಐ ಮನವಿ ಮಾಡಿದ್ದರೂ ಜಿಲ್ಲಾಧಿಕಾರಿ ಅದಕ್ಕೆ ಒಪ್ಪಿರಲಿಲ್ಲ. ತಜ್ಞರ ತಪಾಸಣಾ ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅನಾಹುತ ಸಂಭವಿಸಿದರೆ ತಾವೇ ಜವಾಬ್ದಾರರು ಎಂದು ಮುಚ್ಚಳಿಕೆ ಬರೆದುಕೊಡುವಂತೆ ಎನ್‌ಎಚ್‌ಎಐ ಯೋಜನಾ ನಿರ್ದೇಶಕರಿಗೆ ತಿಳಿಸಿದ್ದರು. ಎನ್‌ಎಚ್‌ಎಐ ಕೆಲವು ದಾಖಲೆಗಳನ್ನು ಒದಗಿಸಿ, ಪತ್ರ ನೀಡಿದ ನಂತರ ಅವುಗಳು ಅಸಮರ್ಪಕವಾಗಿವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮತ್ತೆ ಆಕ್ಷೇಪಿಸಿದ್ದರು. ತಜ್ಞರು ಬಂದು ಮರು ಪರಿಶೀಲನೆ ಮಾಡಬೇಕು ಎಂದು ಷರತ್ತು ವಿಧಿಸಿದ್ದರು. ಆದರೆ, ತಾವೇ ವಿಧಿಸಿದ್ದ ಷರತ್ತಿನಲ್ಲಿ ರಾಜೀ ಮಾಡಿಕೊಂಡು ಸೋಮವಾರದಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಷರತ್ತು:
ಸುರಂಗ ಸುರಕ್ಷತೆಯ ಬಗ್ಗೆ ಪರಿಶೀಲನೆಗೆ ಬರಬೇಕಿದ್ದ ಪುಣೆಯ ತಜ್ಞರು ಅ. 8 ರಂದು ಬರುವುದಾಗಿ ಎನ್‌ಎಚ್‌ಎಐ ಇ-ಮೇಲ್ ಮೂಲಕ ತಿಳಿಸಿದೆ. ಅವರ ಪರಿಶೀಲನೆಯವರೆಗೆ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಆದರೆ, ಅ.8 ರಂದು ಪುಣೆಯ ತಜ್ಞರು ಪರಿಶೀಲನೆ ನಡೆಸದೇ ಇದ್ದಲ್ಲಿ ಮತ್ತೆ ವಾಹನ ಸಂಚಾರ ಬಂದ್ ಮಾಡಲಾಗುವುದು. ಈ ನಡುವೆ ಯಾವುದೇ ಅವಗಢಗಳು ಸಂಭವಿಸಿದಲ್ಲಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕರೇ ಜವಾಬ್ದಾರರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ಷರತ್ತು ವಿಧಿಸಿದ್ದಾರೆ.
ರಾಜಕೀಯ
ಕಾರವಾರ-ಭಟ್ಕಳ ಹೆದ್ದಾರಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯಾಗುವ ಬದಲು ಸುರಂಗ ಬಂದ್ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಬಿಜೆಪಿ, ಕಾಂಗ್ರೆಸ್ ಪರಸ್ಪರ ಆರೋಪ ಮಾಡಿಕೊಂಡವು.
ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ವಿಸ್ತರಣೆ ಕಾಮಗಾರಿ ಕೈಗೊಂಡ ಐಆರ್‌ಬಿ 9 ವರ್ಷವಾದರೂ ಕಾಮಗಾರಿ ಮುಗಿಸಿಲ್ಲ. ಅಸಮರ್ಪಕ ಕಾಮಗಾರಿಯಿಂದ ಅಪಘಾತಗಳಲ್ಲಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಸಂಪೂರ್ಣ ಕಾಮಗಾರಿಯಾಗದೇ ಟೋಲ್ ವಸೂಲಿ ಮಾಡಲಾಗುತ್ತಿದೆ. ಕೇಂದ್ರ ಬಿಜೆಪಿ ಸಚಿವರಿಗೆ ಸಂಬಂಧಪಟ್ಟ ಸಂಸ್ಥೆಯು ಈ ಹೆದ್ದಾರಿಯ ಗುತ್ತಿಗೆ ಪಡೆದಿದೆ. ಇದರಿಂದ ಬಿಜೆಪಿಯವರು ಅಕ್ರಮದ ವಿರುದ್ಧ ಮಾತನಾಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ದೂರಿದ್ದರು. ನಾನು ಸುರಂಗದಲ್ಲಿ ವಾಹನ ಸಂಚಾರ ತಡೆಯಲು ಹೇಳಿಲ್ಲ. ಟೋಲ್ ಶುಲ್ಕ ವಸೂಲಿ ತಡೆಯಲು ಸೂಚಿಸಿದ್ದೆ ಎಂದಿದ್ದರು. ವೈದ್ಯ ಹೇಳಿಕೆಗಳಿಗೆ ಕಾರವಾರ ಶಾಸಕ ಸತೀಶ ಸೈಲ್ ಬೆಂಬಲವಾಗಿ ನಿಂತಿದ್ದರು.
ಇನ್ನೊಂದೆಡೆ ಬಿಜೆಪಿಯ ಎಂಎಲ್‌ಸಿ ಗಣಪತಿ ಉಳ್ವೇಕರ್, ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಜನರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದ್ದರು. ಸಚಿವರು, ಶಾಸಕರ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ತೀವ್ರ ಪ್ರತಿಭಟನೆ ನಡೆಸಿ, ಸುರಂಗ ತೆರವಿಗೆ ಒತ್ತಾಯಿಸಿದ್ದರು. ಜಿಲ್ಲಾಧಿಕಾರಿ ನಡೆಯ ಬಗ್ಗೆಯೂ ಉಳ್ವೇಕರ್ ಅಸಮಾಧಾನ ಹೊರ ಹಾಕಿದ್ದರು.
ಸೈಲ್-ಉಳ್ವೇಕರ್ ಸಭೆ
ಶಾಸಕ ಸತೀಶ ಸೈಲ್ ಸೋಮವಾರ ಎಂಎಲ್‌ಸಿ ಗಣಪತಿ ಉಳ್ವೇಕರ್ ಅವರ ಕಚೇರಿಗೆ ಸೋಮವಾರ ತೆರಳಿ ಸಭೆ ನಡೆಸಿದರು. ಸುಮಾರು 1 ತಾಸಿನ ಮಾತುಕತೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸತೀಶ ಸೈಲ್, `ಸುರಂಗ ಮಾರ್ಗದ ಸುರಕ್ಷತೆಯ ಬಗ್ಗೆ ಜು.15 ರಂದು ಪುಣೆಯ ಸಿಒಪಿಇ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಭೂಗರ್ಭ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಎ.ಮೆಶ್ರಾಂ ಅವರು ಪರಿಶೀಲನೆ ನಡೆಸಿದ್ದಾಗಿ ಎನ್‌ಎಚ್‌ಎಐ ತಿಳಿಸಿದೆ. ಆದರೆ, ಅವರ ಪರಿಶೀಲನೆ ವೇಳೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಅಧಿಕಾರಿಗಳಿರಲಿಲ್ಲ. ಅಲ್ಲದೆ, ಅವರು ಒಂದೇ ದಿನದಲ್ಲಿ ವರದಿ ನೀಡಿದ್ದು, ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮರು ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತದಿಂದ ಎನ್‌ಎಚ್‌ಎಐಗೆ ಸೂಚಿಸಲಾಗಿತ್ತು. ಡಾ.ಮೆಶ್ರಾಂ ಸದ್ಯ ಲಭ್ಯವಿಲ್ಲದ ಕಾರಣ ಅ.8 ರ ನಂತರ ಬರಲಿದ್ದಾರೆ. ಅಲ್ಲಿಯವರೆಗೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಿರಲಿ ಎಂದು ಸುರಂಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.