ಮೈಸೂರಿನ ನಿಜವಾದ ನ್ಯಾಷನಲ್ ಲೀಡರ್ ಡಾ. ಯತೀಂದ್ರ ಸಿದ್ದರಾಮಯ್ಯ : ಪ್ರತಾಪ್ ಸಿಂಹ ವ್ಯಂಗ್ಯ

Pratap Simha
Published on

ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ? ಎಂಬ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಟೀಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ. ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದು ಬರವಣಿಗೆ ಮೂಲಕ ಹೆಸರು ಸಂಪಾದಿಸಿ ಈ ಸ್ಥಾನಕ್ಕೆ ಬಂದಿದ್ದೇನೆ. ಅಪ್ಪ ಸಿಎಂ ಆಗಿದ್ದರೆ ತನ್ನ ಖಾಸಗಿ ಲ್ಯಾಬ್ಗೆ ಗುತ್ತಿಗೆ ಪಡೆದುಕೊಳ್ಳುವಂತವರು ನ್ಯಾಷನಲ್ ಲೀಡರ್. ಅಪ್ಪನ ನೆಲೆ ಬಿಡಿಸಿ ಬದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್. ತಾನು ಹೇಳಿದ ವರ್ಗಾವಣೆ ಲಿಸ್ಟ್‌ಗೆ ಸಹಿ ಮಾಡಿ ಅಂತ ಸಿಎಂ ಮೇಲೆ ಒತ್ತಡ ತರುವವರು ನ್ಯಾಷನಲ್ ಲೀಡರ್. ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಶ್ರೀರಾಮನ ಪೇಟೆಂಟ್‌ಅನ್ನು ಬಿಜೆಪಿಗೆ ಕೊಟ್ಟಿದ್ದೇ ಕಾಂಗ್ರೆಸ್. ರಾಮನನ್ನು ಕಾಂಗ್ರೆಸಿಗರು ಭಕ್ತಿ ಭಾವದಿಂದ ಪೂಜಿಸಿದ್ದರೆ ಬಿಜೆಪಿಗೆ ಯಾಕೆ ಈ ಪೇಟೆಂಟ್ ಸಿಗುತ್ತಿತ್ತು ? ರಾಮನ ಅಸ್ತಿತ್ವವನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಕಾಂಗ್ರೆಸ್‌ಗೆ ‘ರಾಮನನ್ನು ಬಿಜೆಪಿ ಪೇಟೆಂಟ್ ಪಡೆದಿದೆಯೇ’ ಎಂದು ಕೇಳುವ ನೈತಿಕತೆ ಇಲ್ಲ. ಕಾಂಗ್ರೆಸ್‌ಗೆ ರಾಮರಾಜ್ಯದ ಮೇಲೆ ನಂಬಿಕೆ ಇದೆಯಾ? ರಾವಣ ರಾಜ್ಯದ ಮೇಲೆ ನಂಬಿಕೆ ಇದೆಯಾ ಎಂಬುದನ್ನು ಕಾಂಗ್ರೆಸ್ ಅವರನ್ನೇ ಕೇಳಬೇಕು. ಕಾಂಗ್ರೆಸ್‌ಗೆ ಗಾಂಧೀಜಿಯ ರಾಮ ರಾಜ್ಯದ ಮೇಲೆ ನಂಬಿಕೆ ಇಲ್ಲ ಎಂದು ಲೇವಡಿ ಮಾಡಿದರು.

ಅಯೋಧ್ಯೆ ಮಂತ್ರಾಕ್ಷತೆಗೆ ಅನ್ನಭಾಗ್ಯ ಅಕ್ಕಿ ಬಳಸಿದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಮಂತ್ರಾಕ್ಷತೆ ಸ್ವೀಕರಿಸಲು ಆಗದ ಕೈಗಳಿಗೆ ಮಂತ್ರಾಕ್ಷತೆಗೆ ಅಕ್ಕಿ ಕೊಡಲು ಮನಸ್ಸು ಬರುತ್ತಾ? ಅಕ್ಷತೆ, ಗೋತ್ರದ ಮೇಲೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯಗೆ ನಂಬಿಕೆ ಇಲ್ಲ. ಅಯೋಧ್ಯೆಗೆ ಹೋಗುವುದು ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net