

ಬೆಂಗಳೂರು :ಶಿಷ್ಯನ ಸಂಪತ್ತನ್ನು ಅಪಹರಿಸುವವನು ಗುರು ಎನಿಸಿಕೊಳ್ಳುವುದಿಲ್ಲ. ಬದಲಾಗಿ ಶಿಷ್ಯನ ತಾಪವನ್ನು ತಗ್ಗಿಸುವವನು ನಿಜವಾದ ಗುರು. ಅಂತಹ ಗುರುವಿಗೆ ಶರಣಾಗುವ ಮೂಲಕ ಆತ್ನ ಅಂತಃಕರಣದ ಕರುಣೆಯನ್ನು ಸಂಪಾದಿಸಿದ ಆಧ್ಯಾತ್ಮ ಸಾಧನೆ ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.
ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ೌಂಡೇಶನ್ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿರುವ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬ ವ್ಯಕ್ತಿ ತನ್ನ ಗುರಿ ಸಾಧನೆಯನ್ನು ಮಾಡಲು ಸಮರ್ಥ ಗುರುವನ್ನು ಕಂಡುಕೊಳ್ಳಬೇಕು. ಗುರಿಸಾಧನೆಗೆ ಬರುವ ಎಲ್ಲ ಅಡಚಣೆಗಳನ್ನು ಮೀರಿ ಮುನ್ನಡೆಯಬೇಕು. ಪ್ರತಿಯೊಬ್ಬ ವ್ಯಕ್ತಿಯನ್ನು ಆದಿ ದೈವಿಕ, ಆದಿ ಬೌತಿಕ ಮತ್ತು ಆಧ್ಯಾತ್ಮಿಕ ಎಂಬುದಾಗಿ ತ್ರಿತಾಪಗಳು ಕಾಡುತ್ತಿರುತ್ತವೆ. ಅವುಗಳನ್ನು ನಿವಾರಿಸಿ ಆಧ್ಯಾತ್ಮದ ಹಾದಿಯಲ್ಲಿ ಮುನ್ನಡೆಯಲು ಶ್ರೀಗುರುವು ಮಾರ್ಗದರ್ಶನ ಮಾಡುವ ವಿಧಾನವನ್ನು ಶ್ರೀಜಗದ್ಗುರು ರೇಣುಕಾಚಾರ್ಯರು ಶ್ರೀಸಿದ್ಧಾಂತ ಶಿಖಾಮಣಿಯ ಗುರುಕಾರುಣ್ಯ ಸ್ಥಲದಲ್ಲಿ ಬೋದಿಸಿದ್ದಾರೆ ಎಂದು ಶ್ರೀಶೈಲ ಜಗದ್ಗುರುಗಳು ವಿವರಿಸಿದರು.
ಸಮಾರಂಭದಲ್ಲಿ ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಮಠದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಅಭಾವೀಮ ಬೆಂಗಳೂರು ಘಟಕದ ಅಧ್ಯಕ್ಷ ಎಸ್. ಗುರುಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬಾ ಬಸವರಾಜು, ಯಲಹಂಕ ಘಟಕದ ಅಧ್ಯಕ್ಷೆ ಹೇಮಲತಾ ಚಿದಾನಂದ್, ವಕೀಲರಾದ ಆತ್ಮ ಹಿರೇಮಠ, ಜಗದೀಶ್ ಭಿಕ್ಷಾವರ್ತಿಮಠ ಮತ್ತಿತರರು ಉಪಸ್ಥಿತರಿದ್ದರು.