ಸಾರಿಗೆ ಇಲಾಖೆ ಹೆಣಗಾಟ ಬಸ್‌ಗಳಲ್ಲಿ ಉಸಿರಾಡಲೂ ಪರದಾಟ

19 lxr BUS STORYYYYYYYYYYYYYYYYYYY
Published on

ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಮಹಿಳೆಯರಿಗೆ ಉಚಿತ ಬಸ್‌ನ ಶಕ್ತಿ ಯೋಜನೆ ಜಾರಿಯಾದಾಗಿನಿಂದ ನಿತ್ಯ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ಈ ಸವಾಲನ್ನು ನಿಭಾಯಿಸುವಲ್ಲಿ ಸಾರಿಗೆ ಇಲಾಖೆ ಹೆಣಗಾಡುತ್ತಿದ್ದರೆ ಮತ್ತೊಂದೆಡೆ ವಿದ್ಯಾರ್ಥಿಗಳು, ನೌಕರರು, ಪುರುಷ ಪ್ರಯಾಣಿಕರು ಬಸ್‌ಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ವಿದ್ಯಾರ್ಥಿಗಳು ತರಗತಿಯಿಂದ ವಂಚಿತ:
ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲ ಬಸ್‌ಗಳು ಫುಲ್ ರಶ್‌ನೊಂದಿಗೆ ಸಂಚರಿಸುತ್ತಿವೆ. 55ರಿಂದ 60 ಜನ ಪ್ರಯಾಣಿಸುವ ಬಸ್‌ನಲ್ಲಿ 150ಕ್ಕಿಂತ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ತುಂಬಿರುವ ಬಸ್‌ನಲ್ಲಿ ನಿಲ್ಲಲ್ಲೂ ಸ್ಥಳಾವಕಾಶವಿಲ್ಲದೇ ನೂಕುನುಗ್ಗಲು ಸಾಮಾನ್ಯವಾಗಿರುತ್ತದೆ. ಇದರಿಂದ ಬೆಳಗ್ಗೆ ವಿದ್ಯಾರ್ಥಿಗಳು, ನೌಕರರು, ವಯೋವೃದ್ಧರು ಸೇರಿ ಅನೇಕ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.


ಬೆಳಿಗ್ಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೇರಿ ಪಟ್ಟಣದ ನೂರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಗದಗ, ಹುಬ್ಬಳ್ಳಿ, ಮುಳಗುಂದ, ಸಂಶಿ, ಹಾವೇರಿ ಭಾಗಕ್ಕೆ ಕಾಲೇಜುಗಳಿಗೆ ಹೋಗುತ್ತಾರೆ. 9ರಿಂದ 10 ಗಂಟೆಗೆ ಕಾಲೇಜಿನಲ್ಲಿರಬೇಕಾದ ವಿದ್ಯಾರ್ಥಿಗಳು 11ರಿಂದ 12 ಗಂಟೆಯಾದರೂ ಬಸ್ ನಿಲ್ದಾಣದಲ್ಲಿಯೇ ಉಳಿದಿರುತ್ತಾರೆ. ಒಂದು ಗಂಟೆ ಪ್ರಯಾಣ 2 ಗಂಟೆಯಾಗುತ್ತಿದೆ.

ಇದರಿಂದ ವಿದ್ಯಾರ್ಥಿಗಳಿಗೆ ನಿತ್ಯ ಮೊದಲೆರಡು ತರಗತಿಗಳಿಗೆ ಹಾಜರಾಗಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳಾದ ಪ್ರವೀಣ ಬನ್ನಿಕೊಪ್ಪ, ಆನಂದ ಯರ್ಲಘಟ್ಟಿ, ವಿಜಯ ವಡವಿ, ಬಸವರಾಜ ಎಂ ಅಳಲು ತೋಡಿಕೊಂಡರು.


ಚಾಲಕ, ನಿರ್ವಾಹಕರ ಗೋಳಾಟ

ಹಳೆಯ ಬಸ್‌ಗಳು, ಒಬ್ಬರ ಮೇಲೋಬ್ಬರು ಬೀಳುತ್ತಾ, ನೂಕುನುಗ್ಗಲಿನ ನಡುವೆ ಉಸಿರಾಟಕ್ಕೂ ಪರದಾಡಬೇಕಾದ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಸರಿಸಿ ಮುಂದಿನ ನಿಲ್ದಾಣ ಬರುವಷ್ಟರಲ್ಲಿ ಟಿಕೆಟ್ ವಿತರಿಸಬೇಕು. ಪ್ರಯಾಣಿಕರ ಜಗಳ ವಿಕೋಪ ಪಡೆದುಕೊಳ್ಳುತ್ತದೆ. ಪ್ರಯಾಣಿಕರು ಬಸ್ ಹೋಗಲೂ ಬಿಡುವುದಿಲ್ಲ. ನಿಲ್ಲಲೂ ಬಿಡುವುದಿಲ್ಲ. ಬಸ್ ತುಂಬಿದ್ದರೂ ಅಡ್ಡಗಟ್ಟುತ್ತಾರೆ. ಬಾಗಿಲು ಬಡಿಯುತ್ತಾರೆ, ಕಿಟಕಿಯಿಂದಲೇ ಹತ್ತಲು ಯತ್ನಿಸುತ್ತಾರೆ. ರಸ್ತೆಗಳು ಹಾಳಾಗಿದ್ದು, ಬಸ್‌ಗಳಲ್ಲಿ ಸಾಮರ್ಥ್ಯ ಮೀರಿ ಪ್ರಯಾಣಿಕರು ತುಂಬಿರುತ್ತಾರೆ. ಟಿಕೆಟ್ ಕೊಡಲೂ ಅವಕಾಶ ಇಲ್ಲದ್ದರಿಂದ ಮಹಿಳಾ ನಿರ್ವಾಹಕರಂತೂ ಹೈರಾಣಾಗುತ್ತಿದ್ದಾರೆ ಎಂದು ನಿರ್ವಾಹಕರು ಅಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಲಕ್ಷ್ಮೇಶ್ವರ ಸಾರಿಗೆ ಘಟಕದಲ್ಲಿ ಒಟ್ಟು 69 ಬಸ್‌ಗಳಿದ್ದು ನಾಲ್ಕೈದು ಬಸ್ಸುಗಳು ರಿಪೇರಿಯಲ್ಲಿವೆ. ದಿನಕ್ಕೆ ಸರಾಸರಿ 6 ಲಕ್ಷ ರೂ ಕಲೆಕ್ಷನ್ ಆಗುತ್ತಿತ್ತು. ಆದರೆ ಇದೀಗ ಸರಾಸರಿ 9 ಲಕ್ಷ ರೂ ಬರುತ್ತಿದೆ. ಭಾನುವಾರ ಒಂದೇ ದಿನ 53 ಸಾವಿರ ಜನ ಪ್ರಯಾಣ ಮಾಡಿದ್ದು ಇದರಿಂದ 10 ಲಕ್ಷಕ್ಕಿಂತ ಹೆಚ್ಚು ಕಲೆಕ್ಷನ್ ಆಗಿದೆ. ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು, ನೌಕರರ ವರ್ಗದವರಿಗೆ ಸರಿಯಾದ ವೇಳೆಗೆ ಬಸ್ ಕೊಡಲಾಗುತ್ತಿಲ್ಲ. ಹಗಲೂ-ರಾತ್ರಿ ಕೆಲಸದ ಒತ್ತಡದಲ್ಲಿದ್ದೇವೆ. -ಸವಿತಾ ಆದಿ-ಘಟಕ ವ್ಯವಸ್ಥಾಪಕಿ ಲಕ್ಷ್ಮೇಶ್ವರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net