ಆಯುಧ ಪೂಜೆ ವ್ಯಾಪಾರ ಜೋರು

ಆಯುಧ ಪೂಜೆ ವ್ಯಾಪಾರ ಜೋರು
Published on

ಹಾಸನ: ಆಯುಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಹೂವು, ಬಾಳೆ, ಹಣ್ಣುಗಳ ವ್ಯಾಪಾರ ಜೋರಾಗಿತ್ತು.

ನಗರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಮುಂದಾದರು. ನಗರದ ಮಹಾವೀರ ವೃತ್ತ, ಕಟ್ಟಿನಕೆರೆ ಮಾರುಕಟ್ಟೆ, ಸುಭಾಷ್ ಚೌಕ, ತಣ್ಣೀರುಹಳ್ಳದಲ್ಲಿ ರಸ್ತೆಬದಿಯಲ್ಲಿ ವ್ಯಾಪಾರ, ವಹಿವಾಟು ನಡೆಸಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಹಬ್ಬದ ಹಿನ್ನೆಲೆ ಹೂವು, ಹಣ್ಣಿನ ಬೆಲೆಯಲ್ಲಿ ಏರಿಕೆ ಕಂಡಿತು. ಬೆಳಗ್ಗೆಯಿಂದಲೇ ಜನರು ಮಾರುಕಟ್ಟೆಯತ್ತ ಬಂದರು. ನಗರದ ಮಹಾವೀರ ವೃತ್ತ, ಸುಭಾಷ್ ಚೌಕ, ತಣ್ಣೀರುಹಳ್ಳ, ರೈಲ್ವೆ ನಿಲ್ದಾಣ, ಜಿಲ್ಲಾ ಕ್ರೀಡಾಂಗಣ ಮುಂಭಾಗ, ರಿಂಗ್ ರಸ್ತೆ, ಡೇರಿ ವೃತ್ತ ಸೇರಿ ಮುಂತಾದ ಕಡೆ ರಸ್ತೆ ಬದಿ ವ್ಯಾಪಾರ ನಡೆಯಿತು. ಬೂದುಗುಂಬಳ ಹಾಗೂ ಹೂವಿನ ಹಾರಗಳು ಯಥೇಚ್ಛ ಪ್ರಮಾಣದಲ್ಲಿ ಮಾರಾಟವಾದ್ದರಿಂದ ವ್ಯಾಪಾರಿಗಳು ರಸ್ತೆಗೆ ನಿಂತು ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು.

ಒಂದು ಮಾರು ಚೆಂಡು ಹೂವು ಬೆಲೆ 60 ರೂ., ಸೇವಂತಿ 80 ರಿಂದ 120 ರೂ., ಬೂದುಗುಂಬಳ ಕೆ.ಜಿ.ಗೆ 20 ರಿಂದ 40 ರೂ. ವರೆಗೆ ಮಾರಾಟ ಮಾಡಲಾಯಿತು. ಸೇಬು ಕೆ.ಜಿ.ಗೆ 150 ರೂ., ಕಿತ್ತಳೆ ಹಣ್ಣು ಒಂದೂವರೆ ಕೆ.ಜಿ.ಗೆ 100 ರೂ., ಮೂಸಂಬಿ 100 ರೂ., ದಾಳಿಂಬೆ 150 ರೂ., ಬಾಳೆಹಣ್ಣು ಕೆ.ಜಿ.ಗೆ 120 ರೂ., ಬಾಳೆಕಂದು ಜೋಡಿಗೆ 20 ರಿಂದ 40ರೂ., ಕಬ್ಬಿನ ಜಲ್ಲೆ ಜೋಡಿಗೆ 20 ರೂ. ಮಾವಿನ ಸೊಪ್ಪು ಒಂದು ಕಟ್ಟಿಗೆ 10 ರೂ. ನಂತೆ ಮಾರಾಟವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net