

ಹುಬ್ಬಳ್ಳಿ: ಎರಡು ವಾರ ನಿರಂತರ ಸುರಿದ ಮಳೆಯಿಂದಾಗಿ ಸುಸ್ತಾಗಿ ಹೋಗಿದ್ದ ಹುಬ್ಬಳ್ಳಿ ಧಾರವಾಡ ಜನತೆ ಇದೀಗ ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ತೆಗ್ಗು ಗುಂಡಿಗಳು ಇದೀಗ ಗೋಚರವಾಗುತ್ತಿವೆ. ಮಳೆ ನಿಂತು ಹೋದ ಮೇಲೆ ಒಂದೊಂದೇ ರಸ್ತೆ ಗುಂಡಿಗಳು ಬಾಯ್ತೆರೆದಿರುವುದು ಕಂಡು ಬರುತ್ತಿವೆ.
ಹೌದು. ಇದು ಹುಬ್ಬಳ್ಳಿ ಮಹಾನಗರದ ಪ್ರಸ್ತುತ ಸ್ಥಿತಿ. ನಗರದ ಪ್ರಮುಖ ರಸ್ತೆಗಳು, ಒಳರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಕಾಣುತ್ತಿವೆ. ವಾಹನ ಸವಾರರು ಎದ್ದು ಬಿದ್ದು ಸಾಗಬೇಕಿದೆ. ಮಳೆಗಾಲದಲ್ಲಿ ಒಂದು ರೀತಿಯ ತೊಂದರೆ, ಯಾತನೆ ಅನುಭವಿಸಿದ ಜನ ಈಗ ತೆಗ್ಗು ಗುಂಡಿಗಳಿಂದ ರೋಸಿ ಹೋಗಿದ್ದಾರೆ.
ನ್ಯೂ ಕಾಟನ್ ಮಾರ್ಕೆಟ್‌ನಿಂದ ಕಿಮ್ಸ್ ಹಿಂಬದಿ ರಸ್ತೆ, ಕಾರವಾರ ರಸ್ತೆ ಗಣೇಶನಗರ, ಹಳೇ ಹುಬ್ಬಳ್ಳಿ ಆನಂದನಗರ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಿಲ್ಲ. ಸಿಮೆಂಟ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಅಶೋಕನಗರ, ವಿಶ್ವೇಶ್ವರನಗರ, ಅಧ್ಯಾಪಕನಗರ, ವಿಜಯನಗರದಲ್ಲಿನ ರಸ್ತೆಯ ಸ್ಥಿತಿಯೇ ಬೇರೆ. ಸುಧಾರಿತ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ ಎಂಬುದು ಸಮಾಧಾನದ ಸಂಗತಿಯಾದರೂ, ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಧೂಳುಮಯ ವಾತಾವರಣ: ಧೂಳಿನ ಹುಬ್ಬಳ್ಳಿ ಎಂದೇ ಖ್ಯಾತವಾಗಿದ್ದ ನಗರದಲ್ಲಿ ಈಗಷ್ಟೇ ಕಾಂಕ್ರೀಟ್ ರಸ್ತೆ ನಿರ್ಮಾಣ ಆರಂಭವಾದ ನಂತರ ಜನರು ಒಂದಿಷ್ಟು ನಿರಾಳರಾಗಿದ್ದರು. ಆದರೆ, ಬಹುತೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಪೂರ್ತಿಯಾಗಿಲ್ಲ.
ಇನ್ನು ಪೂರ್ತಿ ಆಗಿರುವ ರಸ್ತೆಗಳ ಮೇಲೆ ಮಳೆ ನಿಂತ ನಂತರ ಹರಡಿಕೊಂಡಿದ್ದ ರಾಡಿ ಬಿಸಿಲು ಬೀಳುತ್ತಲೆ ಒಣಗಿ ಧೂಳು ಹಾರುತ್ತಿದೆ. ಹಾಗಾಗಿ ವಾಹನಗಳು ಹಾಯ್ದು ಹೋಗುತ್ತಲೇ ಧೂಳು ಎಲ್ಲೆಡೆ ಆವರಿಸುತ್ತಿದೆ. ಮತ್ತೆ ಹುಬ್ಬಳ್ಳಿ ಧೂಳುಮಯವಾಗುತ್ತಿದೆ. ಇದರಿಂದಾಗಿ ಮಹಾನಗರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತೆಗ್ಗು ಗುಂಡಿಗೆ ಬಿದ್ದು ಬೈಕ್, ಕಾರು ಚಲಿಸುವುದರಿಂದ ಸವಾರರು ತೀವ್ರ ಯಾತನೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಬೈಕ್ ಸವಾರರು ಕೈ-ಕಾಲು ಮುರಿದುಕೊಳ್ಳುವ ಸಾಧ್ಯತೆಗಳಿವೆ.
ಗುಂಡಿ ತುಂಬಿ: ಮಹಾನಗರ ಪಾಲಿಕೆ ಕೂಡಲೇ ಗುಂಡಿ ತುಂಬುವ ಕೆಲಸ ಮಾಡಬೇಕು. ಎಲ್ಲ ಕಡೆ ಸಂಚರಿಸಿ ಮೊದಲು ಎಲ್ಲೆಲ್ಲಿ ಗುಂಡಿಗಳಿವೆ ಪರಿಶೀಲನೆ ಮಾಡಬೇಕು. ನಂತರ ಜಲ್ಲಿ, ಡಾಂಬರ್ ಅಥವಾ ಕಾಂಕ್ರೀಟ್ ಹಾಕಿ ಭರ್ತಿ ಮಾಡಬೇಕು. ಇದರಿಂದ ತಾತ್ಕಾಲಿಕ ಪರಿಹಾರವಾದರೂ ಸಿಗಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಬಹಳಷ್ಟು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಪಕ್ಕದಲ್ಲಿ ಹಾಕಲಾಗಿರುವ ಪೇವರ್ಸ್‌ಗಳು ಅಸ್ತವ್ಯಸ್ತವಾಗಿರುವುದರಿಂದ ಬೈಕ್ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ರಸ್ತೆಗೆ ಹೊಂದಿಕೊಂಡು ಪೇವರ್ಸ್ ಇವೆ. ಆದರೆ, ಇವು ಕೆಲವೆಡೆ ಎತ್ತರ, ಇನ್ನೂ ಕೆಲವೆಡೆ ಕಿರಿದಾಗಿವೆ. ಇಂತಹ ಸ್ಥಳಗಳಲ್ಲಿ ಬೈಕ್‌ಗಳು ಸ್ಕಿಡ್ ಆಗುತ್ತಿವೆ ಎಂಬುದು ಸವಾರರು ದೂರು.
ಕಟ್ಟಿಕೊಂಡಿರುವ ಒಳಚರಂಡಿ: ಮಹಾನಗರದ ಅನೇಕ ಸ್ಥಳಗಳಲ್ಲಿ ಒಳಚರಂಡಿ ಮಾರ್ಗಗಳು ಮಳೆಗಾಲದಲ್ಲಿ ಕಟ್ಟಿಕೊಂಡು ಅವಾಂತರ ಸೃಷ್ಟಿ ಮಾಡಿದವು. ಮಳೆ ನೀರಿನೊಂದಿಗೆ ಕೊಳಚೆಯೂ ಬಹಳಷ್ಟು ಕಡೆ ಹರಿಯಿತು. ಇದೀಗ ಮಳೆ ಕಡಿಮೆಯಾಗಿದ್ದು, ಕೊಳಚೆ ಮಾತ್ರ ಹೊರಗೆ ಹರಿಯುತ್ತಿದೆ. ಇಂಥವುಗಳನ್ನು ಒಂದಿಷ್ಟು ದುರಸ್ತಿ ಮಾಡಬೇಕಾಗಿದೆ.
ಹುಬ್ಬಳ್ಳಿಯನ್ನು ಸ್ಮಾರ್ಟ್‌ಸಿಟಿ ಮಾಡಿದ್ದೇವೆ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ, ಇಲ್ಲಿ ಎಲ್ಲಿ ನೋಡಿದರೂ ರಸ್ತೆಗಳಲ್ಲಿ ತೆಗ್ಗು-ಗುಂಡಿಗಳಿವೆ. ಕಾಂಕ್ರೀಟ್ ರಸ್ತೆಗಳ ನಿರ್ಮಾಣವೂ ಸರಿಯಾಗಿಲ್ಲ. ಮಳೆಗಾಲದಲ್ಲಿ ಗಟಾರದಲ್ಲಿ ನೀರು ಹರಿಯದೆ ರಸ್ತೆ ಮೇಲೆ ನಿಲ್ಲುವಂಥ ಸ್ಥಿತಿ ಎಷ್ಟೋ ಕಡೆ ಇದೆ. ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟವರು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. I ಅನಿಲ ಕವಿಶೆಟ್ಟಿ, ಸ್ಥಳೀಯರು ಗಟಾರ, ಒಳಚರಂಡಿ ವ್ಯವಸ್ಥೆ ಸರಿಯಾಗಿದ್ದರೆ ರಸ್ತೆ ಸರಿಯಾಗಿರುತ್ತದೆ. ಎಷ್ಟೋ ಕಡೆ ಗಟಾರ ವ್ಯವಸ್ಥೆ ಇಲ್ಲದೆ (ಇದ್ದರೂ ಸರಿಯಾಗಿರದೆ) ರಸ್ತೆಗಳು ಹದಗೆಟ್ಟಿವೆ. ಸಿಸಿ ರಸ್ತೆ ಎಂದು ಹೇಳಿಕೊಂಡು ಒಂದೇ ಕಡೆ ಕೋಟ್ಯಂತರ ರೂಪಾಯಿ ಸುರಿಯುವ ಬದಲು ಎಲ್ಲ ಬಡಾವಣೆಯಲ್ಲಿ ಸಮರ್ಪಕ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. I ಪ್ರೇಮನಾಥ ಚಿಕ್ಕತುಂಬಳ, ಸ್ಥಳೀಯರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಈಗಾಗಲೇ ಎರಡು ಸಭೆ ಮಾಡಲಾಗಿದೆ. ರಸ್ತೆ ಗುಂಡಿಗಳನ್ನು ತುಂಬಲು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ನಿತ್ಯ ಒಂದು ವಾರ್ಡ್ ಭೇಟಿ ಮಾಡಿ ಸಮಸ್ಯೆ ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. I ಮಹೇಶ ಟೆಂಗಿನಕಾಯಿ, ಶಾಸಕ, ಹು-ಧಾ ಸೆಂಟ್ರಲ್ ಹಿಂದಿನ ಸರ್ಕಾರ ಅತೀ ಹೆಚ್ಚು ಆದೇಶ ನೀಡಿದ್ದರಿಂದ ಫಂಡ್ ಇಲ್ಲದೆ ಬಹಳಷ್ಟು ರಸ್ತೆಗಳನ್ನು ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಸೆಂಟ್ರಲ್ ಹಾಗೂ ಸ್ಟೇಟ್ ಫಂಡ್‌ನಿಂದ ಕೆಲಸಗಳು ನಡೆಯುತ್ತಿವೆ. ಕೆಲವೆಡೆ ಯುಜಿಡಿ ಸರಿ ಇಲ್ಲ ಎಂದು ಬಿಟ್ಟಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆಯೂ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ರಸ್ತೆಗಳನ್ನು ಮೋಟರೇಬಲ್ ಮಾಡಲು ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.I ಪ್ರಸಾದ ಅಬ್ಬಯ್ಯ, ಹು-ಧಾ ಪೂರ್ವ ಶಾಸಕ