

ಆರ್.ಕೃಷ್ಣ ಮೈಸೂರು
ಮತ್ತೊಮ್ಮೆ ನಾಡಹಬ್ಬ ದಸರಾ ಬರುತ್ತಿದ್ದರೂ. ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದ ‘ಪ್ರವಾಸೋದ್ಯಮ ಸರ್ಕ್ಯೂಟ್’ ರಚನೆಗೆ ಸರ್ಕಾರ ಇನ್ನೂ ಮುಂದಾಗಿಲ್ಲ.
ಪ್ರವಾಸೋದ್ಯಮ ಅಭಿವೃದ್ಧಿಗೆ ತಕ್ಕಂತೆ ಮೈಸೂರು ಹಾಗೂ ಸುತ್ತಮುತ್ತಲ ಪ್ರವಾಸಿತಾಣಗಳನ್ನು ಬೆಸೆಯುವ ‘ಪ್ರವಾಸೋದ್ಯಮ ಸರ್ಕ್ಯೂಟ್’ ರಚಿಸುವ ಮೂಲಕ ಉದ್ಯಮ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಹಲವಾರು ವರ್ಷಗಳ ಒತ್ತಾಯಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ನಾಡಹಬ್ಬ ದಸರಾ ಬಂದಾಗಲೆಲ್ಲಾ ಎಲ್ಲ ಮುಖ್ಯಮಂತ್ರಿಗಳು ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಘೋಷಣೆ ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಪ್ರವಾಸಿತಾಣಗಳ ಬೆಸೆಯುವ ‘ಸರ್ಕ್ಯೂಟ್’ ಘೋಷಣೆ ಮಾತ್ರ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಾಡಹಬ್ಬ ಉದ್ಘಾಟನೆ ಸಮಯದಲ್ಲಿ ಪ್ರವಾಸಿ ತಾಣವಾಗಿರುವ ಮೈಸೂರು, ಬೇಲೂರು, ಹಳೆಬೀಡು, ಹಂಪಿ, ಬದಾಮಿ, ಐಹೊಳೆ ಪಟ್ಟದಕಲ್ಲು ಸೇರಿದಂತೆ ನಾಡಿನ ಪ್ರವಾಸಿ ತಾಣಗಳನ್ನು ಬೆಸೆಯುವ ಬೇರೆ ಬೇರೆ ಪ್ರವಾಸೋದ್ಯಮ ಸರ್ಕ್ಯೂಟ್ ಮಾಡಲಾಗುವುದು ಎಂದು ಪ್ರಸ್ತಾಪಿಸಿದ್ದರು. ಬಳಿಕ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಅವರು ಸಹ ಪ್ರವಾಸೋದ್ಯಮ ಸರ್ಕ್ಯೂಟ್ ಜಾರಿಗೊಳಿಸುವುದಾಗಿ ಘೋಷಿಸಿದ್ದರು.
ಜತೆಗೆ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿಯೂ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಸರ್ಕ್ಯೂಟ್ ವ್ಯವಸ್ಥೆ ಮಾಡುವುದಾಗಿ ಬಜೆಟ್‌ನಲ್ಲಿ ತಿಳಿಸಿದ್ದರು. ಈಗ ಎರಡನೇ ಅವಧಿಗೆ ಅವರೇ ಮುಖ್ಯಮಂತ್ರಿಯಾಗಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಮಾಡಿದ್ದ ಘೋಷಣೆ ಇನ್ನೂ ಜಾರಿಗೊಂಡಿಲ್ಲ.
ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ಜಾರಿ ಮಾಡಿದ್ದರು. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡಂತೆ ಕಾವೇರಿ ಪ್ರವಾಸೋದ್ಯಮ ಪ್ರಾಧಿಕಾರ ಸ್ಥಾಪಿಸಲಾಗುತ್ತದೆ ಎಂದು 2014ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ ಅದು ಇನ್ನು ಅನುಷ್ಠಾನಗೊಂಡಿಲ್ಲ.
ಜತೆಗೆ ಪ್ರತಿ ವರ್ಷ ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಿ ಮತ್ತೆ, ಮತ್ತೆ ಅದೆ ಘೋಷಣೆ ಮಾಡುವುದು ಒಂದು ರೀತಿಯ ರೂಢಿ ಪದ್ಧತಿಯಾಗಿ ನಡೆದುಕೊಂಡು ಬರುತ್ತಿದೆ. ಈ ವರ್ಷವೂ ನವರಾತ್ರಿ ಸಮಯದಲ್ಲಿಯೇ ವಿಶ್ವ ಪ್ರವಾಸೋದ್ಯಮ ದಿನ ಬಂದಿದ್ದು, ಈ ವರ್ಷವಾದರೂ ಘೋಷಣೆ ಅನುಷ್ಠಾನಕ್ಕೆ ಬರುವುದೆ ಎನ್ನುವ ಕಾತರ ಉದ್ಯಮಿಗಳದ್ದಾಗಿದೆ.
ನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮೈಸೂರು, ಜತೆಗೆ ಅರಮನೆಯಿಂದಾಗಿ ವಿಶ್ವದ ಗಮನ ಸೆಳೆಯುತ್ತಿದೆ. ಇಲ್ಲಿನ ಪ್ರವಾಸೋದ್ಯಮವನ್ನು ನಂಬಿ ನೂರಾರು ಜನರು ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಸಾವಿರಾರು ಕುಟುಂಬಗಳು ಬದುಕು ಕಂಡುಕೊಂಡಿದ್ದು, ಪ್ರವಾಸೋದ್ಯಮವೇ ಜೀವಾಳ. ಇಂತಹ ಸ್ಥಳಕ್ಕೆ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲು, ಮೂಲಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಸರ್ಕ್ಯೂಟ್ ಅಗತ್ಯ ಇದ್ದು, ಸರ್ಕ್ಯೂಟ್ ರಚನೆಯಾದರೆ ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರಿಯಾಗಲಿದೆ ಎನ್ನುವ ವಿಶ್ವಾಸವಿದೆ.
ಮೈಸೂರನ್ನು ವಿಶ್ವ ಮಟ್ಟದಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸಬೇಕೆಂದರೆ ಪ್ರವಾಸಿಗರನ್ನು ಸೆಳೆಯುವಂತೆ ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸಬೇಕಾಗಿದೆ. ಅಲ್ಲದೆ ಬಂದ ಪ್ರವಾಸಿಗರು ನಗರದಲ್ಲಿ ಉಳಿದುಕೊಳ್ಳಲು ಸೂಕ್ತ ಸೌಲಭ್ಯವನ್ನು ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಬೇಕಿದೆ.
ಪ್ರವಾಸೋದ್ಯಮ ಸರ್ಕ್ಯೂಟ್ ಸ್ವರೂಪ
ಪ್ರವಾಸಿತಾಣಗಳನ್ನು ಒಂದಕ್ಕೊಂದು ನೇರ ಸಂಪರ್ಕ ಕಲ್ಪಿಸಿ, ರಸ್ತೆ, ಮಾರ್ಗದರ್ಶಿ ಫಲಕ, ಸಾರಿಗೆ, ಹೋಟೆಲ್, ನಿರಂತರ ಕಾರ್ಯಕ್ರಮ ಆಯೋಜಿಸಿರುವುದು ಪ್ರವಾಸೋದ್ಯಮ ಸರ್ಕ್ಯೂಟ್ ಉದ್ದೇಶವಾಗಿದೆ. ಮೈಸೂರು ಹಾಗೂ ಸುತ್ತಮುತ್ತ ಇರುವ ಪ್ರವಾಸಿ ತಾಣಗಳನ್ನು ಎಲ್ಲರೂ ಎಲ್ಲ ಸ್ಥಳವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಸೂಕ್ತ ಮಾರ್ಗದರ್ಶನ, ಪ್ರವಾಸಿತಾಣಗಳಲ್ಲಿ ಉಳಿದುಕೊಳ್ಳಲು ಸೌಲಭ್ಯವೂ ಇರುವುದಿಲ್ಲ. ಹಾಗಾಗಿ ಮೈಸೂರಿಗೆ ಬಂದವರು ಬೇರೆ ಕಡೆ ಹೋಗದೆ ವಾಪಸ್ ಹೋಗುವುದು ಹೆಚ್ಚಾಗುತ್ತಿದೆ.
ಇಂತಹ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮೈಸೂರಿಗೆ ಬಂದವರು ಕೆ.ಆರ್.ಎಸ್, ಬೇಲೂರು, ಹಳೆಬೀಡು, ಬಂಡೀಪುರ, ನಾಗರಹೊಳೆ, ಸೋಮನಾಥಪುರ, ರಂಗನತಿಟ್ಟು, ಶ್ರೀರಂಗಪಟ್ಟಣ ಹೀಗೆ ಹಲವು ಕೇಂದ್ರಗಳಿಗೆ ತೆರಳುವಂತೆ ವಾಹನ ಸೌಲಭ್ಯ, ನಿರಂತರವಾಗಿ ಕಾರ್ಯಕ್ರಮ ರೂಪಿಸುವುದು ಇದರ ಉದ್ದೇಶವಾಗಿದೆ.
ಮೈಸೂರು ಕೇಂದ್ರಿತ ಪ್ರವಾಸೋದ್ಯಮ ಸರ್ಕ್ಯೂಟ್ ರಚಿಸಿ, ಮೈಸೂರು ಭಾಗದ ತಾಣಗಳ ಬಗ್ಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಚಾರ ಮಾಡಿ ಮಾರ್ಗ ರೂಪಿಸಬೇಕಿದೆ. ಮೈಸೂರು ಭಾಗಕ್ಕೆ ಬರುವ ಪ್ರವಾಸಿಗರಿಗೆ ಪ್ಯಾಕೇಜ್ ಮಾದರಿಯಲ್ಲಿ ಅರಮನೆಗಳು, ದೇವಸ್ಥಾನಗಳು, ಐತಿಹಾಸಿಕ, ಧಾರ್ಮಿಕ ಮತ್ತು ಪ್ರಕೃತಿ ಸೊಬಗಿನ ಪ್ರವಾಸಿತಾಣಗಳನ್ನು ನೋಡುವಂತೆ ಮಾಡಬೇಕಿದೆ. ಈ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕಿದೆ.
ವರ್ಷದಿಂದ ವರ್ಷಕ್ಕೆ ಮೈಸೂರು ಪ್ರವಾಸಿತಾಣ ಎನ್ನುವ ಹೆಗ್ಗಳಿಕೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ. ಮೈಸೂರು ಪ್ರವಾಸೋದ್ಯಮ ಎಂದರೆ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆಆರ್‌ಎಸ್ ಎನ್ನುವ ಮಟ್ಟಕ್ಕೆ ಸೀಮಿತಗೊಂಡು ಒಂದು ದಿನದ ಪಿಕ್‌ನಿಕ್ ಆಗಿದೆ. ಇದರಿಂದ ಪ್ರವಾಸಿಗರು ಮೈಸೂರಿನಲ್ಲಿ ಉಳಿಯುತ್ತಿಲ್ಲ. ಪ್ರವಾಸಿಗರು ಮೈಸೂರಿನಲ್ಲಿ ಉಳಿಯುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು, ವರ್ಷಪೂರ್ತಿ ವಸ್ತು ಪ್ರದರ್ಶನ ಇರಬೇಕು. ನಗರದಲ್ಲಿ ಹಾಗೂ ಹೊಂದಿಕೊಂಡಂತೆ ಇರುವ ಇತರ ಪ್ರವಾಸಿಗಣಗಳನ್ನು ಬೆಸೆಯುವ ಮಾರ್ಗ ರೂಪಿಸಬೇಕು. ಅದಕ್ಕೆ ಸಕ್ಯೂರ್ಟ್ ಅಗತ್ಯ.
ಸಿ. ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ