ಗಮಕದ ಸ್ವರ ಕಲ್ಪನೆಯೇ ವಿಶಿಷ್ಟ

10sgr3
ಸಾಗರ ತಾಲೂಕಿನ ವರದಾಪುರದಲ್ಲಿ ಏರ್ಪಡಿಸಿದ್ದ ಶ್ರಾವಣ ಗಮಕ ಸಪ್ತಾಹದ ಸಮಾರೋಪದಲ್ಲಿ ಗಂಗಮ್ಮ ಕೇಶವಮೂರ್ತಿ ಮಾತನಾಡಿದರು. ಗಣಪತಿ ಭಟ್ ನಿಟ್ಟೂರು, ಕೆ.ಆರ್.ಕೃಷ್ಣಯ್ಯ, ಎಂ.ಜಿ.ಕೃಷ್ಣಮೂರ್ತಿ ಇತರರಿದ್ದರು.
Published on

ಸಾಗರ: ಗಮಕ ಕಲೆ ಅಭ್ಯಾಸಕ್ಕೆ ಸಾಹಿತ್ಯ ಮತ್ತು ಸಂಗೀತದ ಜ್ಞಾನ ಅವಶ್ಯ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಹೇಳಿದರು.

ತಾಲೂಕಿನ ವರದಾಪುರದ ಶ್ರೀ ಶ್ರೀಧರಾಶ್ರಮದಲ್ಲಿ ಶ್ರೀಧರ ಸೇವಾ ಮಹಾಮಂಡಲ ಮತ್ತು ಮಲೆನಾಡು ಗಮಕ ಕಲಾ ಸಂಘ ಶನಿವಾರ ಸಂಜೆ ಏರ್ಪಡಿಸಿದ್ದ 13ನೇ ವರ್ಷದ ಶ್ರಾವಣ ಗಮಕ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿ, ಗಮಕದ ಸ್ವರ ಕಲ್ಪನೆಯೇ ವಿಶಿಷ್ಟ. ಮಹಾಕಾವ್ಯದ ರಸಕ್ಕೆ ಪುಷ್ಠಿ ಕೊಡಬೇಕಾದ ಕಾರಣ ಗಮಕಕ್ಕೆ ಸಂಗೀತ ಅಧ್ಯಯನದ ಅವಶ್ಯಕತೆ ಇದೆ ಎಂದರು.
ಗಮಕ ಕಲೆ ಬೆಳೆಸುವುದಕ್ಕೆ ಎಲ್ಲರ ಸಹಕಾರ ಬೇಕು. ವಾಚನಕಾರರು, ವ್ಯಾಖ್ಯಾನಕಾರರು, ಗಮಕಿಗಳು ಎಲ್ಲರೂ ಸೇರಿ ಈ ರಥವನ್ನು ಎಳೆಯಬೇಕು. ಗಮಕಿಗಳು ತಮಗೆ ಗೊತ್ತಿರುವ ವಿದ್ಯೆಯನ್ನು ಆಸಕ್ತರಿಗೆ ಕಲಿಸಬೇಕು. ಯುವ ಗಾಯಕರು ಗಮಕ ಕಲಿಯಲು ಹಿಂದೇಟು ಹಾಕಬಾರದು. ನಾನು ಆಸಕ್ತರಿಗೆ ಆನ್‌ಲೈನ್‌ನಲ್ಲಿ ತರಬೇತಿ ನೀಡುತ್ತೇನೆ. ಯುವ ಗಾಯಕರು ಸುಗಮ ಸಂಗೀತದ ಕಡೆ ಗಮನ ಹರಿಸುತ್ತಿದ್ದಾರೆ. ಗಮಕವನ್ನೂ ಅಭ್ಯಾಸ ಮಾಡಬೇಕು. ಮಕ್ಕಳಿಗೆ ಗಮಕ ಕಲಿಸಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪಾಧ್ಯಾಪಕ ವಿದ್ವಾನ್ ಗಣಪತಿ ಭಟ್ ನಿಟ್ಟೂರು ಮಾತನಾಡಿ, ಸಾಹಿತ್ಯ ಮತ್ತು ಸಂಗೀತ ಮಿಶ್ರಣದ ಸಮೃದ್ಧ ಕಲೆ ಗಮಕ. ಇದರ ರಸಸ್ವಾದವನ್ನು ಸವಿದೇ ಅನುಭವಿಸಬೇಕು. ಬೇರೆ ಬೇರೆ ಸಂಗೀತ ಪ್ರಕಾರಗಳಿಂದ ಗಮಕ ಕಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ರಾಮಾಯಣ, ಮಹಾಭಾರತದಂತಹ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ಗಮಕ ಸಾಹಿತ್ಯ ನೀಡಿರುವ ಕೊಡುಗೆ ದೊಡ್ಡದು ಎಂದರು.
ಮಲೆನಾಡು ಗಮಕ ಕಲಾ ಸಂಘದ ಅಧ್ಯಕ್ಷ ಕೆ.ಆರ್.ಕೃಷ್ಣಯ್ಯ ಮಾತನಾಡಿ, 2009ರಿಂದ ಈ ಕ್ಷೇತ್ರದಲ್ಲಿ ಗಮಕ ಕಲೆ ರೂಢಿ ತಗೊಂಡಿದೆ. ಗುರು ಶ್ರೀಧರರಿಗೆ ಗಮಕ ಎಂದರೆ ತುಂಬ ಪ್ರೀತಿ. ಅವರ ಇಚ್ಛೆಯಂತೆ ಮಹಾಮಂಡಲದ ಸಹಕಾರದಲ್ಲಿ ಕಳೆದ 13 ವರ್ಷದಿಂದ ಶ್ರಾವಣದಲ್ಲಿ ಸೇವೆ ಸಲ್ಲುತ್ತಿದೆ. ಗಂಗಮ್ಮನವರು ಗಮಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕರೊನಾ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಆಸಕ್ತರಿಗೆ ಕಲಿಸಿದ್ದಾರೆ. ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸ ಭಾರತ ಕಾವ್ಯಗಳನ್ನು ಅತ್ಯಂತ ಸರಳವಾಗಿ, ಮನೋಜ್ಞವಾಗಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಕುಮಾರವ್ಯಾಸ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಮೀರಾ ಅವರು ಆರ್ಯಭಟ ಪ್ರಶಸ್ತಿ ಪುರಸ್ಕೃತರಾಗಿದ್ದು, ಉತ್ತಮ ವ್ಯಾಖ್ಯಾನಕಾರರು ಆಗಿ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ ಎಂದರು.
ಮಲೆನಾಡು ಪ್ರಮುಖ ಕಲಾ ಸಂಘದ ವತಿಯಿಂದ ಗಂಗಮ್ಮ ಕೇಶವಮೂರ್ತಿ ಅವರನ್ನು ಗೌರವಿಸಲಾಯಿತು. ಗಾಂಗೇಯ ಗೆಲಿದನು ವರಸುದರ್ಶನ ಭಾಗವನ್ನು ಗಂಗಮ್ಮ ವಾಚಿಸಿದರು, ಮೀರಾ ವ್ಯಾಖ್ಯಾನಿಸಿದರು.
ಶ್ರೀ ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ವಿ.ಶ್ರೀಧರರಾವ್, ಗಮಕ ಕಲಾ ಸಂಘದ ಕಾರ್ಯದರ್ಶಿ ರವೀಂದ್ರ, ಕಲಸಿ ತಿಮ್ಮಪ್ಪ, ಗಮಕಿ ಸಮುದ್ಯತಾ, ಎಸ್.ಕೆ.ಪ್ರಭಾವತಿ, ಪಿ.ಎಸ್.ಕೃಷ್ಣಮೂರ್ತಿ, ಬಿ.ಜಿ.ಮಂಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net