ಕರ್ಮಯೋಗಿ ಬಿರುದು ವ್ಯಕ್ತಿತ್ವಕ್ಕೆ ಸೂಕ್ತ - ಹರಿಕೃಷ್ಣ ಪುನರೂರು ಅಭಿವಂದನಾ ಕಾರ್ಯಕ್ರಮದಲ್ಲಿ ಡಾ. ವೀರೇಂದ್ರ ಹೆಗ್ಗಡೆ

punaroor
Published on

ಮಂಗಳೂರು: ಹರಿಕೃಷ್ಣ ಪುನರೂರು ಅನೇಕ ಸ್ಥಾನಗಳನ್ನು ಅಲಂಕರಿಸಿ, ಅದರ ಶ್ರೇಯಸ್ಸನ್ನು ಹೆಚ್ಚಿಸಿದ್ದಾರೆ. ಇಂದು ಅವರಿಗೆ ನೀಡಿರುವ ಕರ್ಮಯೋಗಿ ಎನ್ನುವ ಬಿರುದು ಅವರ ವ್ಯಕ್ತಿತ್ವ ಹಾಗೂ ಅವರು ನೀಡಿದ ಕೊಡುಗೆಗಳಿಗೆ ಸೂಕ್ತವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಪಿಲಿಕುಳದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶನಿವಾರ ಹರಿಕೃಷ್ಣ ಪುನರೂರು ಅಭಿವಂದನಾ ಸಮಿತಿ ವತಿಯಿಂದ ನಡೆದ ಅಭಿವಂದನ ಮತ್ತು ಕರ್ಮಯೋಗಿ ಬಿರುದು ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಪುನರೂರು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಅಮೂಲ್ಯವಾದದ್ದು. ಸಮಾಜದ ಮೇಲೆ ದೀನದಲಿತರ ಮೇಲೆ ವಿಶೇಷ ಕರುಣೆ ಹೊಂದಿದ್ದ ಅವರು ಓರ್ವ ನಿಗರ್ವಿ, ನಿರಹಂಕಾರಿ ವ್ಯಕ್ತಿತ್ವ ಉಳ್ಳವರು ಎಂದರು.

ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಹರಿಕೃಷ್ಣ ಪುನರೂರು ಅವರ ಸೇವಾ ಗುಣವು ನಿಜಕ್ಕೂ ಸಮಾಜಕ್ಕೆ ಮಾದರಿ ಎಂದರು.

ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ರಂಗ ಭೂಮಿ, ಯಕ್ಷಗಾನಕ್ಕ ಅವರು ನೀಡಿದ ಕೊಡುಗೆ ಅಗಾದವಾದದ್ದು, ಪುನರೂರು ಮತ್ತು ಅವರ ಸಂಗಡಿಗರ ಹೋರಾಟ ಇಂದು ಮುಲ್ಕಿ ತಾಲ್ಲೂಕು ಸ್ಥಾಪನೆಯಾಗುವುದಕ್ಕೆ ಕಾರಣವಾಗಿದೆ ಎಂದರು.

ಸಾಹಿತಿ ಹಾಗೂ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅಭಿನಂದನಾ ನುಡಿಗಳನ್ನಾಡಿದರು. ಹರಿಕೃಷ್ಣ ಪುನರೂರು. ಬಡವರಿಗೆ ಸ್ವಂತ ಸೂರನ್ನು ಕಟ್ಟಿಸಿಕೊಟ್ಟ ಪುಣ್ಯಾತ್ಮ. ಇವರು ವಿನಯದಿಂದ ಜನರಿಗೆ ಹಿತವಾಗುವಂತ ಸಾಧನೆಗಳನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಪುನರೂರು ಅವರ ಪತ್ನಿ ಉಷಾ ರಾಣಿ, ದುಗ್ಗಣ್ಣ ಸಾಮಂತರು, ಪ್ರದೀಪ್ ಕಲ್ಕೂರ, ಉದ್ಯಮಿ ಶ್ರೀಪತಿ ಭಟ್, ಡಾ.ಶ್ರೀನಾಥ್, ಭುವನಾಭಿ ರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿ, ನವನೀತ್ ಶೆಟ್ಟಿ ಕದ್ರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net