ರಾಜ್ಯದಲ್ಲಿ ಮತ್ತೊಮ್ಮೆ ಮೈತ್ರಿ ಸರ್ಕಾರದ ಕಾಲ ದೂರವಿಲ್ಲ

jds workers meeting
ಶಿವಮೊಗ್ಗ ಜೆಡಿಎಸ್ ಕಚೇರಿಯಲ್ಲಿ ಎಂಎಲ್‌ಸಿ ಎಸ್.ಎಲ್.ಬೋಜೇಗೌಡ ಅವರನ್ನು ಸನ್ಮಾನಿಸಲಾಯಿತು. ಶಾರದಾ ಪೂರ‌್ಯಾನಾಯ್ಕಾ, ಶಾರದಾ ಅಪ್ಪಾಜಿ ಗೌಡ, ಕಡಿದಾಳ್ ಗೋಪಾಲ್, ಗೀತಾ ಸತೀಶ್, ದೀಪಕ್ ಸಿಂಗ್, ಸುಬ್ಬೇಗೌಡ, ರಾಮಕೃಷ್ಣ, ನರಸಿಂಹ ಗಂಧದಮನೆ ಇದ್ದರು.
Published on

ಶಿವಮೊಗ್ಗ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿರುವುದು ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ. ಜೆಡಿಎಸ್-ಬಿಜೆಪಿ ಹೊಂದಾಣಿಕೆಯಿಂದ ರಾಜ್ಯದಲ್ಲಿ ಮತ್ತೊಮ್ಮೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ದಿನ ಸನ್ನಿಹವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದನ್ನು ನೋಡಬೇಕಿದೆ. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದರು.
ಯಾವ ಕಾರಣಕ್ಕೂ ಪಕ್ಷ ಸಂಘಟನೆಯಲ್ಲಿ ಹಿಂದೆ ಬೀಳಬಾರದು. ಕಾರ್ಯಕಾರಿಣಿ ಸಭೆಗಳಲ್ಲಿ ತೆಗೆದುಕೊಂಡು ನಿರ್ಧಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಶಿವಮೊಗ್ಗ ಜಿಲ್ಲೆ ಒಂದು ಕಾಲದಲ್ಲಿ ಜೆಡಿಎಸ್ ಭದ್ರ ಕೋಟೆಯಾಗಿತ್ತು. ಆದರೆ ಕಾರಣಾಂತರಗಳಿಂದ ಅಸ್ತಿತ್ವ ಕಳೆದುಕೊಳ್ಳಬೇಕಾಯಿತು. ಇನ್ಮುಂದೆ ಎಲ್ಲರೂ ಸಂಘಟಿತರಾಗುವ ಮೂಲಕ ಶಿವಮೊಗ್ಗವನ್ನು ಮತ್ತೊಮ್ಮೆ ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡುವ ಅವಕಾಶವಿದೆ ಎಂದು ಹೇಳಿದರು.
ಅಧಿಕಾರ ಇಲ್ಲದಿದ್ದರೆ ಪಕ್ಷದ ಸಂಘಟನೆ ಬಹಳ ಕಷ್ಟ. ನಾವು ಪ್ರಾಮಾಣಿಕ, ಜನರ ಪರವಾಗಿ ಧ್ವನಿ ಎತ್ತಿದಾಗ ಯಾವ ಅಧಿಕಾರಿಯೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ನಿಷ್ಠೆ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪ್ರತಿಫಲ ನಿರೀಕ್ಷಿಸಬಹುದು. ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಕಾರ್ಯಕರ್ತರಲ್ಲಿದೆ. ಇದನ್ನು ಅರ್ಥಮಾಡಿಕೊಂಡು ಮುಂದೆ ಸಾಗಬೇಕು. ಶಿಕ್ಷಕರ ಕ್ಷೇತ್ರದಿಂದ ನನ್ನನ್ನು ಗೆಲ್ಲಿಸಿದ್ದು ನಿಮ್ಮ ಕೆಲಸ ಕಾರ್ಯಗಳನ್ನು ಮಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕ ಮಾತನಾಡಿ, ಎಲ್ಲರ ಶ್ರಮದಿಂದ ಎಸ್.ಎಲ್.ಬೋಜೇಗೌಡ ಗೆಲುವು ಸಾಧಿಸಿದ್ದಾರೆ. ಅವರ ಮೇಲಿನ ನಿರೀಕ್ಷೆ ಬಹಳಷ್ಟಿದೆ. ಶಿಕ್ಷಕರ ಪರವಾಗಿ ಸಾಕಷ್ಟು ಕೆಲಸ ಮಾಡಿರುವ ಅವರನ್ನು ಶಿಕ್ಷಕರು ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆಲ್ಲಿಸಿಕೊಟ್ಟಿದ್ದಾರೆ. ಮುಂಬರುವ ಎಲ್ಲ ಚುನಾವಣೆಗಳನ್ನೂ ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಗೌಡ ಮಾತನಾಡಿ, ಮುಂದೆ ಜಿಪಂ, ತಾಪಂ ಚುನಾವಣೆ ಬರಲಿದ್ದು ಕಾರ್ಯಕರ್ತರು ಹೆಚ್ಚು ಶ್ರಮ ಹಾಕಬೇಕಿದೆ. ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಪಕ್ಷದ ಸಂಘಟನೆ ಮಾಡಲು ತಾಲೂಕುಗಳ ಕಾರ್ಯಕರ್ತರ ಬೆಂಬಲ ಅವಶ್ಯ. ಎಲ್ಲ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಶಿವಮೊಗ್ಗ ತಾಲೂಕು ಅಧ್ಯಕ್ಷ ದೀಪಕ್ ಸಿಂಗ್, ಸುಬ್ಬೇಗೌಡ, ರಾಮಕೃಷ್ಣ, ನರಸಿಂಹ ಗಂಧದಮನೆ ಇತರರಿದ್ದರು.

ಹಗರಣಗಳಿಂದ ಕಾಂಗ್ರೆಸ್ ಬಣ್ಣ ಬಯಲು
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಬಯಲು ಮಾಡಿದೆ. ವಾಲ್ಮೀಕಿ ಹೆಸರಲ್ಲಿದ್ದ ನಿಗಮವನ್ನೇ ದರೋಡೆ ಮಾಡಿದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕಿಡಿಕಾರಿದರು. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಕಂಗಾಲಾಗಿದೆ. ಪಕ್ಷದ ಸದಸ್ಯತ್ವ ಹೆಚ್ಚು ಮಾಡಲು ಮಾಡಬೇಕು. ಜಿಪಂ, ತಾಪಂ, ಪಾಲಿಕೆ ಚುನಾವಣೆ ಬರಲಿದ್ದು, ಪಕ್ಷದ ಪದಾಧಿಕಾರಿಗಳು ಮುತುವರ್ಜಿ ವಹಿಸಿದರೆ ಸದಸ್ಯರ ಸಂಖೆ ಹೆಚ್ಚಾಗಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net