ಬೆಂಗಳೂರು: ಹೋಟೆಲ್‌ಗೆ ಬಂದಿದ್ದ ಯುವತಿ ಜತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಯುವತಿಗೆ ಕಿರುಕುಳ ನೀಡಿದ ಆರೋಪದಡಿ ಮೂವರು ಅಪರಿಚಿತ ಯುವಕರ ವಿರುದ್ಧ ವಿಜಯನಗರ ಪೊಲೀಸರು ಎಫ್‌ಐಆರ್ ದಾಖಲಾಗಿದೆ.
ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿರುವ ನಮ್ಮೂಟ ಹೆಸರಿನ ಹೋಟೆಲ್‌ನಲ್ಲಿ ಕ್ಯಾಶಿಯರ್ ಆಗಿರುವ ಸುಕನ್ಯಾ ಎಂಬುವರು ನೀಡಿದ ದೂರಿನ ಮೇರೆಗೆ ಮೂವರು ಅಪರಿಚಿತ ಯುವಕರ ವಿರುದ್ಧ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
ಸುಂಕದಕಟ್ಟೆ ನಿವಾಸಿ ಸುಕನ್ಯಾ ಎಂಬುವರು ನಮ್ಮೂಟ ಎಂಬ ಹೆಸರಿನ ಹೋಟೆಲ್‌ನಲ್ಲಿ ಪಾರ್ಟ್‌ಟೈಮ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ೨೦೨೩ ಡಿ.೩೦ ರಂದು ಸಂಜೆ ೭.೩೦ ಸುಮಾರಿಗೆ ಹೋಟೆಲ್‌ಗೆ ಬಂದ ಮೂವರು ಅಪರಿಚಿತ ಯುವಕರು ದೋಸೆ ಖರೀದಿಸಿ, ಅಲ್ಲಿಯೇ ತಿನ್ನುತ್ತಿದ್ದರು. ಅದೇ ವೇಳೆ ಯುವತಿಯೊಬ್ಬಳು ಹೋಟೆಲ್‌ಗೆ ಬಂದು ಕಾಫಿ ಖರೀದಿಸಿ, ಕ್ಯಾಷ್ ಕೌಂಟರ್ ಪಕ್ಕದಲ್ಲೇ ಕಾಫಿ ಕುಡಿಯುತ್ತಿದ್ದರು. ಆಗ ಮೂವರ ಪೈಕಿ ಯುವಕನೊಬ್ಬ ಕ್ಯಾಷ್ ಕೌಂಟರ್ ಬಳಿ ಬಂದು ಕಾಫಿ ಕುಡಿಯುತ್ತಿದ್ದ ಯುವತಿಯ ಹಿಂಭಾಗಕ್ಕೆ ಹೊಡೆದು, ಅದನ್ನು ಪ್ರಶ್ನಿಸಿದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಇತರೆ ಇಬ್ಬರು ಯುವಕರು ದೂರದಿಂದಲೇ ಚಪ್ಪಾಳೆ ತಟ್ಟುತ್ತಾ ಖುಷಿಪಡುತ್ತಿದ್ದರು. ಈ ಬಗ್ಗೆ ನೊಂದ ಯುವತಿ ಯುವಕರ ವಿರುದ್ಧ ಕೂಗಾಡಿದ್ದಾರೆ. ಅದನ್ನು ಗಮನಿಸಿದ ಸಾರ್ವಜನಿಕರು ಹೋಟೆಲ್ ಮುಂದೆ ಜಮಾಯಿಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಹೋಟೆಲ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಮಹಿಳಾ ಗ್ರಾಹಕಿ ಜತೆ ಅಸಭ್ಯವಾಗಿ ವರ್ತಿಸಿದ ಮೂವರು ಯುವಕರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸುಕನ್ಯಾ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ನ ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಮೂವರು ಯುವಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.