ಬೆಳ್ಳಿ ಬಟ್ಟಲಿನ ರೋಚಕ ಕಥಾನಕ, ಮೂರು ನಾಯಿಗಳ ಸಾಹಸಗಾಥೆ, ಶೌರ್ಯ ಪರಾಕ್ರಮದ ಪ್ರತೀಕ, ಹಿರೇಮಸಳಿಯಲ್ಲೊಂದು ‘ವೀರ ಪರಂಪರೆ’

VEERAMUTTESHWARA
ಹಿರೇಮಸಳಿಯ ವೀರಮುತ್ತೇಶ್ವರನ ಮುಖವಾಡ.
Published on

ಪರಶುರಾಮ ಭಾಸಗಿ ವಿಜಯಪುರ

ಏಳೂರು ಕರಿ ಹರಿದು ಗ್ರಾಮಕ್ಕೆ ಬೆಳ್ಳಿ ಬಟ್ಟಲು ತಂದು ಹುತಾತ್ಮನಾದ ‘ವೀರ’ನ ಶೌರ್ಯ-ಪರಾಕ್ರಮ ಹಾಗೂ ತ್ಯಾಗ-ಬಲಿದಾನದ ನೆನಪಿಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಮುಖವಾಡ ಕಟ್ಟಿಕೊಂಡು, ಕೋಲಿನಿಂದ ಹೊಡೆಯುವ ಪರಂಪರೆಯೊಂದು ಇಂದಿಗೂ ಆಚರಿಸಲ್ಪಡುತ್ತಿದೆ.

ಇಂಡಿ ತಾಲೂಕಿನ ಹಿರೇಮಸಳಿಯ ತಳವಾರ ಸಮುದಾಯದಲ್ಲಿ ಆಚರಣೆಯಲ್ಲಿರುವ ಈ ಸಂಪ್ರದಾಯ ತನ್ನದೇ ವೈಶಿಷ್ಟೃ ಹೊಂದಿದೆ. ದೊಡ್ಡ ಕೋಲು ಹಿಡಿದು, ಆಕ್ರೋಶ-ಆವೇಶಭರಿತವಾಗಿ ಹೆಜ್ಜೆ ಹಾಕುವ ದೈವಕ್ಕೆ ಸುತ್ತಲೂ ಬಡಿಗೆಗಳಿಂದ ಹೊಡೆಯಲಾಗುತ್ತದೆ. ಪ್ರತಿಯಾಗಿ ದೈವವೂ ಆ ಬಡಿಗೆಗಳಿಗೆ ಪ್ರತಿ ಏಟು ನೀಡುತ್ತಾ ಸಾಹಸ ಮೆರೆಯುವ ಸಂಪ್ರದಾಯ ಜನಮನ ಸೆಳೆಯುತ್ತಿದೆ. ಮೇ 27ರಂದು ನಡೆಯುವ ಈ ಜಾತ್ರೆಗೆ ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ.

ಏನಿದು ಸಂಪ್ರದಾಯ?

ತಳವಾರ ಸಮುದಾಯದ ಡೊಂಗ್ರೋಜಿ ಕುಟುಂಬದ ಮೂಲ ಪುರಷ ವೀರ ಗ್ರಾಮದ ತಳವಾರಿಕೆ ಮಾಡಿಕೊಂಡಿದ್ದನು. ಈ ವೀರನ ಸಾಹಸ ಮತ್ತು ಪರಾಕ್ರಮವನ್ನು ಸಾಕ್ಷೀಕರಿಸುವುದೇ ಈ ಕುಣಿತದ ಹಿಂದಿರುವ ಉದ್ದೇಶ. ಮುಖವಾಡ ಕಟ್ಟಿಕೊಂಡ ದೈವಿಪುರಷನೋರ್ವ ಮೊದಲಿಗೆ ಕರಿ ಹರಿಯುತ್ತಾನೆ (ಬಲಿ ಕೊಡುವುದು). ಬಳಿಕ ಕುಣಿಯುತ್ತಾ, ಬಡಿಗೆಗಳಿಂದ ಹೊಡೆಯುವ ಎದುರಾಳಿಗಳಿಗೆ ಎದಿರೇಟು ನೀಡುತ್ತಾ ಮೆರವಣಿಗೆ ಹೊರಡುತ್ತಾನೆ. ಮೈತುಂಬ ಬಣ್ಣ ಬಳಿದುಕೊಂಡು ಬಡಿಗೆಯಿಂದ ಹೊಡೆಯುವ ಮತ್ತು ನಾಯಿಯ ವೇಷಧಾರಿಗಳು ಕುಣಿಯುತ್ತಾ ಪರಸ್ಪರ ದಾಳಿ ಮಾಡುತ್ತಾ ಗೌಡರ ಮನೆಗೆ ತೆರಳುತ್ತಾರೆ. ಅಲ್ಲಿದ್ದ ಬೆಳ್ಳಿ ಬಟ್ಟಲು ಪಡೆದು ಮತ್ತೆ ಹೆಜ್ಜೆ ಹಾಕಿಕೊಂಡು ಎದಿರಾಳಿಗಳೊಂದಿಗೆ ಸೆಣೆಸುತ್ತಾ ತನ್ನ ಜೀವರಕ್ಷಿಸಿದ ನಾಯಿಗಳ ದರ್ಶನ ಪಡೆಯುವುದು ಇಲ್ಲಿನ ಸಂಪ್ರದಾಯ.

ಐತಿಹಾಸಿಕ ಹಿನ್ನೆಲೆ

ಹಿರೇಮಸಳಿ ಗ್ರಾಮದ ಸುತ್ತಲೂ ಇರುವ ಕೋಟೆಗೋಡೆ ರಕ್ಷಣೆ ವೀರನ ಹೊಣೆಯಾಗಿತ್ತು. ಒಂದು ದಿನ ತಳವಾರಿಕೆ ಮುಗಿಸಿ ಮನೆಗೆ ಬಂದು ಅವಸರದಿಂದ ಊಟ ಕೇಳಿದಾಗ ಅತ್ತಿಗೆ‘ಏಳು ಊರ ಕರಿ ಹರಿದು ಬಂದಂತೆ ಆಡಬೇಡ, ಸ್ವಲ್ಪ ತಾಳ್ಮೆ ಇರಲಿ’ ಎನ್ನುತ್ತಾಳೆ. ಇದರಿಂದ ಮುನಿಸಿಕೊಂಡ ವೀರ ತಾನು ಸಾಕಿದ ಮೂರು ನಾಯಿಗಳಾದ ನರಸ್ಯಾ, ಚುಂಗ್ಯಾ, ನಂದ್ಯಾಗಳೊಂದಿಗೆ ಮನೆ ತೊರೆಯುತ್ತಾನೆ.

ತಾಂಬಾ ಗ್ರಾಮಕ್ಕೆ ಬರುತ್ತಿದ್ದಂತೆ ಅಲ್ಲಿ ಚೌಡಮ್ಮದೇವಿ ಕುಣಿತ ನಡೆಯುತ್ತಿರುವುದನ್ನು ತಿಳಿದು ಅಲ್ಲಿಗೆ ತೆರಳುತ್ತಾನೆ. ಚೌಡಮ್ಮನ ಕೈಯಲ್ಲಿನ ಬೆಳ್ಳಿ ಬಟ್ಟಲು ಕಾಣುತ್ತಿದ್ದಂತೆ ಅತ್ತಿಗೆ ಆಡಿದ ಕುಹಕ ನೆನಪಾಗುತ್ತದೆ. ಕರಿ ಹರಿದೇ ತೀರಬೇಕೆಂದು ಬೆಳ್ಳಿ ಬಟ್ಟಲು ಕಸಿದುಕೊಂಡು ಹಿರೇಮಸಳಿಯತ್ತ ವೀರ ಓಡುತ್ತಾನೆ. ನೆರೆದಿದ್ದ ಶಸ್ತ್ರಧಾರಿಗಳು ಅಟ್ಟಿಸಿಕೊಂಡು ಬರಲಾಗಿ ನಾಯಿಗಳು ರಕ್ಷಣೆಗೆ ನಿಲ್ಲುತ್ತವೆ. ಅಟ್ಟಾಡಿಸಿಕೊಂಡು ಬರುವ ಜನರಿಗೆ ನಾಯಿಗಳು ದೊಡ್ಡ ಸವಾಲಾಗಿ ನಿಲ್ಲುತ್ತವೆ. ನರಸ್ಯಾನಾಯಿ ತಾಂಬಾ ಹೊರವಲದಲ್ಲಿ ಸಾವಿಗೀಡಾಗುತ್ತದೆ. ಬಳಿಕ ತಾಂಬಾ ಮತ್ತು ಹಿರೇಮಸಳಿ ಮಧ್ಯದಲ್ಲಿ ಚುಂಗ್ಯಾನಾಯಿ, ಆ ಬಳಿಕ ಗ್ರಾಮಕ್ಕೆ ಸಮೀಪ ನಂದ್ಯಾನಾಯಿ ಹುತಾತ್ಮಗೊಳ್ಳುತ್ತವೆ. ಬೆಳ್ಳಿ ಬಟ್ಟಲು, ಕೈಯಲ್ಲಿ ತಲವಾರ್ ಹಿಡಿದು ವೀರ ಗ್ರಾಮಕ್ಕೆ ಬರುವಷ್ಟರಲ್ಲಿ ಕೋಟೆಬಾಗಿಲು ಮುಚ್ಚಿರುತ್ತದೆ. ಎಷ್ಟು ಕೂಗಿದರೂ ಯಾರೂ ಬಾಗಿಲು ತೆಗೆಯದಿದ್ದಾಗ ಕೋಟೆಬಾಗಿಲಿನ ಒಳಭಾಗಕ್ಕೆ ರುಂಡ ಮತ್ತು ಬೆಳ್ಳಿ ಬಟ್ಟಲು ಇರುವ ಕೈ ಸಿಕ್ಕಿಸಿ ಖಡ್ಗದಿಂದ ಕತ್ತರಿಸಿಕೊಳ್ಳುತ್ತಾನೆ. ಇಂದಿಗೂ ನಾಯಿಗಳ ಹೆಸರು ಚಿರಸ್ಥಾಯಿಯಾಗಿದ್ದು ಕುರುಹುಗಳಿವೆ. ಚುಂಗ್ಯಾ ನಾಯಿಯ ಸಾಹಸ ಸಾರುವ ಚುಂಗ್ಯಾನ ಗಿಡ ಇತ್ತೀಚೆಗೆ ಅಳಿದರೆ ನಂದ್ಯಾ ನಾಯಿಗೆ ನಂದನಗುತ್ತಿ ಇಂದಿಗೂ ನೋಡಲು ಸಿಗುತ್ತದೆ. ಬೆಳ್ಳಿ ಬಟ್ಟಲು ಗೌಡರ ಮನೆಯಲ್ಲಿರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net