ಕೆಲಸವಿಲ್ಲದೆ ಒಕ್ಕಣೆ ಯಂತ್ರ ಅತಂತ್ರ

12 RON-1
Published on

ರೋಣ: ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಹಾಗೂ ಆಂಧ್ರಪ್ರದೇಶದಿಂದ ತಾಲೂಕಿಗೆ ಬಂದ ಬೃಹತ್ ಒಕ್ಕಣೆ ಯಂತ್ರಗಳ ಮಾಲೀಕರು ಹಾಗೂ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಹೆಸರು ಒಕ್ಕಣೆ ಮಾಡಲು ಸಾವಿರಾರು ಯಂತ್ರಗಳು ಆಗಮಿಸಿವೆ. ಆದರೆ, ಸತತ ಸುರಿಯುತ್ತಿರುವ ಮಳೆಯಿಂದ ಜಮೀನುಗಳಲ್ಲಿ ನೀರು ನಿಂತು ಯಂತ್ರ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಳೆದ 8 ದಿನದಿಂದ ಒಕ್ಕಣೆ ಮಾಡಲು ಆಗದೆ ಮಾಲೀಕರು ಹಾಗೂ ಕಾರ್ಮಿಕರ ನಿತ್ಯದ ಖರ್ಚು ಹೆಚ್ಚಾಗುತ್ತಿದೆ.

ಖಾಲಿ ನಿಂತ ಯಂತ್ರಗಳು:

ರೋಣ, ಸೂಡಿ, ನರೇಗಲ್ಲ ಹಾಗೂ ವಿವಿಧ ಗ್ರಾಮೀಣ ಭಾಗದ ಹೊರಭಾಗದಲ್ಲಿ ಈಗ ಯಂತ್ರಗಳದೇ ಸದ್ದು. ಎಲ್ಲಿ ನೋಡಿದರಲ್ಲಿ ಯಂತ್ರಗಳು ಕಾಣಸಿಗುತ್ತವೆ. ಕೆಲಸವಿಲ್ಲದೆ ಕಾರ್ಮಿಕರು ರಸ್ತೆ ಪಕ್ಕ ದಿನದೂಡುತ್ತಿದ್ದಾರೆ.

ಊಟ, ವಸತಿಗೂ ಸಂಕಷ್ಟ:

ಜುಲೈ ಕೊನೆಯ ವಾರವೇ ತಾಲೂಕಿಗೆ ಬಂದ ಒಕ್ಕಣೆ ಯಂತ್ರಗಳು ಊರ ಹೊರಭಾಗದಲ್ಲಿ ಠಿಕಾಣಿ ಹೂಡಿವೆ. ಜುಲೈನಲ್ಲಿ ತಾಲೂಕಿನ ಹಲವು ಭಾಗದಲ್ಲಿ ಹೆಸರು ಕಟಾವು ಮಾಡಿ ರಾಶಿ ಮಾಡಲಾಗಿತ್ತು. ಅನಂತರ ಬೆಳೆ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಮಳೆ ನಿರಂತರವಾಗಿದೆ. ಇದರಿಂದ ಯಂತ್ರದ ಮಾಲೀಕರ ಸಂಕಷ್ಟ ಒಂದೆಡೆಯಾದರೆ ರೈತರ ಸಂಕಷ್ಟವೂ ಮತ್ತೊಂದೆಡೆಯಾಗಿದೆ.

ಕಾರ್ಮಿಕರ ಕೊರತೆ ನೀಗಿಸುವ ಯಂತ್ರಗಳು:

ರೋಣ ತಾಲೂಕಿನ ಪ್ರಮುಖ ಮುಂಗಾರು ಬೆಳೆಯಾದ ಹೆಸರು, ಮೆಕ್ಕೆಜೋಳ ಮತ್ತು ಹಿಂಗಾರು ಬೆಳೆಯಾದ ಕಡಲೆಗೆ ಈ ಯಂತ್ರಗಳೇ ಆಸರೆಯಾಗಿವೆ. ಕೃಷಿ ಕಾರ್ಮಿಕರ ಕೊರತೆಯೇ ಯಂತ್ರಗಳ ಮೊರೆ ಹೋಗಲು ಪ್ರಮುಖ ಕಾರಣ ಎಂಬುದು ಸ್ಥಳೀಯ ರೈತರ ಅಭಿಪ್ರಾಯವಾಗಿದೆ. ಹೆಸರು ಕಟಾವು ಮತ್ತು ಈರುಳ್ಳಿ ಕಳೆ ನಿರ್ವಹಣೆ ಒಟ್ಟಿಗೆ ಬರುವುದರಿಂದ ಆಳುಗಳ ಕೊರತೆ ಉಂಟಾಗುತ್ತಿದೆ.

ಹೆಸರು ಕಾಯಿ ಬಿಡಿಸಲು ಬೇಕಾದಷ್ಟು ಆಳುಗಳು ಸಿಗುತ್ತಿಲ್ಲ. ಸಿಕ್ಕರೂ ದಿನಕ್ಕೆ 400 ರೂ. ಕೂಲಿ ಕೇಳುತ್ತಾರೆ. ಒಂದು ಎಕರೆಗೆ 15 ಆಳು ಎಂದು ಲೆಕ್ಕ ಹಾಕಿದರು 6000 ರೂ. ಕೂಲಿ ಆಗುತ್ತದೆ. ಆದರೆ, ಅದೇ ಬೃಹತ್ ಯಂತ್ರದ ಮೂಲಕ ಕಟಾವು ಮಾಡಿದರೆ 1,500 ರೂ. ಖರ್ಚಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಖರ್ಚು ಕಡಿಮೆ ಮಾಡಲು ಬೃಹತ್ ಒಕ್ಕಣೆ ಯಂತ್ರಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಸಂತೋಷ ಕಮತರ, ರೈತ 10ರಿಂದ 15ದಿನಗಳಲ್ಲಿ ರೋಣ ತಾಲೂಕಿನಲ್ಲಿನ ಸಂಪೂರ್ಣ ಹೆಸರು ಬೆಳೆಯನ್ನು ಕಟಾವು ಮಾಡಿ ರೈತರಿಗೆ ಆಸರೆಯಾಗುತ್ತಿದ್ದೆವು. ಆದರೆ, ನಿರಂತರ ಮಳೆಯಿಂದ ಕೆಲಸವಿಲ್ಲದೆ ಖಾಲಿ ಕುಳಿತುಕೊಳ್ಳುತ್ತಿದ್ದೇವೆ. ಸಾವಿರಾರು ರೂ. ಖರ್ಚು ಮಾಡಿ ದೂರದಿಂದ ಬಂದಿದ್ದೇವೆ. ಆದರೆ, ಈಗ ಕೆಲಸವಿಲ್ಲದೆ ಹಣ, ಸಮಯ ಎರಡೂ ವ್ಯರ್ಥವಾಗುತ್ತಿದೆ. ರಮೇಶ ಚಿಕ್ಕಗೌಡ್ರ, ಯಂತ್ರದ ಮಾಲೀಕ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net