

ಉಪ್ಪಿನಬೆಟಗೇರಿ: ಶ್ರೇಷ್ಠ ಅವಧೂತರಾಗಿದ್ದ ತ್ರಿಕಾಲ ಜ್ಞಾನಿ ಗರಗದ ಶ್ರೀ ಮಡಿವಾಳೇಶ್ವರರು ಶ್ರೀ ವೀರಭದ್ರ ದೇವರ ಅವತಾರವಾಗಿದ್ದಾರೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಸಮೀಪದ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚಿಕ್ಕೋಡಿ ತಾಲೂಕಿನ ಯಡೂರ ಪುಣ್ಯಕ್ಷೇತ್ರದ ಶ್ರೀ ವೀರಭದ್ರ ದೇವರ ಭಕ್ತರ ಸಂಘಟನಾ ಜನಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸತ್ಯ ನಿಷ್ಠೆಯನ್ನು ಎತ್ತಿಹಿಡಿದು ಮಾನವನ ರಾಕ್ಷಸಿ ಗುಣ ಸ್ವಭಾವಗಳಿಗೆ ಕಡಿವಾಣ ಹಾಕಿರುವ ಮಹಾಶಕ್ತಿ ವೀರಭದ್ರ ದೇವರಲ್ಲಿ ಸಂಗಮಿಸಿದೆ. ಇಂತಹ ಮಹಾಶಕ್ತಿಯ ವೀರಭದ್ರ ದೇವರ ಮತ್ತೊಂದು ಅವತಾರ ಆಗಿರುವ ಗರಗದ ಶ್ರೀ ಮಡಿವಾಳ ಶಿವಯೋಗಿಗಳ ಕ್ಷೇತ್ರಕ್ಕೆ ಬಂದು ಕರ್ತೃ ಗದ್ದುಗೆಯ ದರ್ಶನ ಪಡೆದಿರುವುದು ಸಂತಸ ತಂದಿದೆ ಎಂದರು.
ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ನೆಲೆಸಿರುವ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಚಿಕ್ಕೋಡಿ ತಾಲೂಕಿನ ಯಡೂರ ಕ್ಷೇತ್ರದ ಶ್ರೀ ವೀರಭದ್ರ ದೇವರು ಲಿಂಗರೂಪಿಯಾಗಿರುವುದು ಬಹಳ ವಿಶೇಷತೆಯನ್ನು ಪಡೆದಿದೆ. ವೀರಭದ್ರ ದೇವರ ಶಕ್ತಿಯ ಕೃಪಾಶೀರ್ವಾದ ಎಲ್ಲರಿಗೂ ಪ್ರಾಪ್ತವಾಗಲಿ ಎಂಬ ಉದ್ದೇಶದಿಂದ ಯಡೂರ ಕ್ಷೇತ್ರದಲ್ಲಿ 2026 ಜನವರಿ 14 ರಿಂದ ನಿರಂತರ 51 ದಿನಗಳ ಧರ್ಮ ಯಜ್ಞ ಹಮ್ಮಿಕೊಳ್ಳಲಾಗಿದೆ. ಧರ್ಮ ಸೇವೆಗಳು, ಪೂಜಾ ಕೈಂಕರ್ಯಗಳಲ್ಲಿ ಸಕಲ ಜೀವಾತ್ಮರಿಗೂ ಅವಕಾಶ ಒದಗಿಸಲಾಗಿದೆ. ವೀರಶೈವ ಬ್ರಾಹ್ಮಣ, ಜೈನ್, ಮರಾಠಾ ಸೇರಿದಂತೆ ಸರ್ವ ಧರ್ವಿುಯರಿಂದ ವೀರಭದ್ರ ದೇವರ ಸನ್ನಿಧಿಯಲ್ಲಿ ಭಕ್ತಿ ಸಲ್ಲಿಕೆ ನಡೆಯುವುದರಿಂದ ಸರ್ವಧರ್ಮ ಸಂಸ್ಕೃತಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ದಕ್ಷಿಣ ಭಾಗದ ಕುಂಭ ಮೇಳ ಯಡೂರ ಕ್ಷೇತ್ರದಲ್ಲಿ ಜರುಗಲಿದೆ. ಇಲ್ಲಿ ಸರ್ವ ಸಮಾಜದವರಿಗೂ ಪಾಲ್ಗೊಳ್ಳುವ ಅವಕಾಶ ದೆ. 5 ಸಾವಿರ ಮಹಿಳೆಯರ ಕುಂಭ ಮೇಳ ಲಕ್ಷ ಲಕ್ಷ ಜನರು ಈ ಧರ್ಮ ಯಜ್ಞದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಇದು ಧರ್ಮ ಜಾಗೃತಿ ಅಭಿಯಾನ. ವೀರಶೈವ ಲಿಂಗಾಯತರ ದೇಹದ ಮೇಲೆ ಇಷ್ಟಲಿಂಗ ಧಾರಣೆ ಇರಬೇಕು ಎಂಬ ಉದ್ದೇಶದಿಂದ ಯಡೂರ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ನಿರಂತರ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯ ಬೇರುಗಂಡಿ ಬ್ರಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯರು, ಮೊರಬ ಜಡಿಮಠದ ಶ್ರೀ ಮಹೇಶ್ವರ ಶಿವಾಚಾರ್ಯರು, ಶಿಂಗನಹಳ್ಳಿ ಹಳ್ಳಗೇರಿಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ಗರಗದ ಕುಮಾರೇಶ್ವರ ಮಠದ ಕುಮಾರ ಶ್ರೀಗಳು, ಯಡೂರ ಕಾಡಸಿದ್ಧೇಶ್ವರಮಠದ ಶ್ರೀ ರೇಣುಕ ದೇವರು, ಶ್ರೀ ಮಡಿವಾಳೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಶೋಕ ದೇಸಾಯಿ, ಮಾಜಿ ಶಾಸಕ ಅಮೃತ ದೇಸಾಯಿ, ನಾಗನಗೌಡ ನೀರಲಗಿ, ಯಡೂರ ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿ ಅಡವಯ್ಯ ಅರಳಿಕಟ್ಟಿಮಠ, ಸುನೀಲ ಬಿರದೆ, ಶಿವಕುಮಾರ ಮೂಕಯ್ಯನಮಠ, ಗುರುಮೂರ್ತಿ ಯರಗಂಬಳಿಮಠ, ಈರಣ್ಣ ದೊಡಮನಿ, ಶಿವಾನಂದ ಅಂಗಡಿ, ಗರಗ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.