

ಲಕ್ಷ್ಮೇಶ್ವರ: ತಾಲೂಕಿನ ಬಾಲೇಹೊಸೂರಿನ ಮೂರು ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಅಂದಾಜು 9.40 ಕೋಟಿ ರೂ. ವೆಚ್ಚದ ಯೋಜನೆ ನಾಲ್ಕು ವರ್ಷ ಕಳೆದರೂ ಸಾಕಾರಗೊಂಡಿಲ್ಲ. ಇದರಿಂದಾಗಿ, ಬೇಸಿಗೆಯಲ್ಲಿ ಕೆರೆಗಳು ಆಸರೆಯಾಗುತ್ತವೆ ಎಂದು ಈ ಸಲವೂ ಜನರು ನಿರೀಕ್ಷಿಸಲು ಆಗದಂತಾಗಿದೆ.
ಏನಿದು ಯೋಜನೆ?: ಹಾವೇರಿ ತಾಲೂಕಿನ ಮರಡೂರ ಗ್ರಾಮದ ಬಳಿ ಜಾಕ್‌ವೆಲ್ ನಿರ್ಮಿಸಿ ವರದಾ ನದಿಯಿಂದ ಬಾಲೇಹೊಸೂರ ಗ್ರಾಮದ ಮೂರು ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸುವ 9.40 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಸಣ್ಣ ನೀರಾವರಿ ಇಲಾಖೆಗೆ 2016ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅನುದಾನ ಮೀಸಲಿಟ್ಟಿದ್ದರು.
2017ರ ಡಿ. 25ರಂದು ಯೋಜನೆಗೆ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಮಂಗಳೂರು ಮೂಲದ ಓಸಿಯನ್ ಕನ್‌ಸ್ಟ್ರಕ್ಷನ್ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿತ್ತು. ಒಟ್ಟು 14 ಕಿ.ಮೀ. ಪೈಪ್‌ಲೈನ್ ಅಳವಡಿಕೆ ಕಾಮಗಾರಿ 2017ರಲ್ಲಿ ಆರಂಭವಾಗಿ 2019ರಲ್ಲಿ ಪೂರ್ಣವಾಗಬೇಕಿತ್ತು. ಆದರೆ, ಕಾಮಗಾರಿ 2022ರ ಏಪ್ರಿಲ್ ವೇಳೆಗೆ ಮುಗಿದಿದ್ದು, ಏಪ್ರಿಲ್‌ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಹಗ್ಗಜಗ್ಗಾಟ ನಡೆದಿರುವುದರಿಂದ ಬೇಕಾದಷ್ಟು ನೀರು ಹರಿಯುತ್ತಿಲ್ಲ. ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಕೆರೆಗೆ ನೀರು ಹರಿಯಲೇ ಇಲ್ಲ. ಆದರೆ, ಗುತ್ತಿಗೆದಾರರು ಬಹುತೇಕ ಬಿಲ್ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಗುತ್ತಿಗೆದಾರರ ಮತ್ತು ಇಲಾಖೆಯ ಇಂಜಿನಿಯರ್‌ಗಳ ಹಗ್ಗ ಜಗ್ಗಾಟದಿಂದ ಕೆರೆಗೆ ನೀರು ಹರಿಯುತ್ತಿಲ್ಲ ಎಂಬ ಮಾತುಗಳು ರೈತರಿಂದ ಕೇಳಿ ಬರುತ್ತಿವೆ.
ಗುತ್ತಿಗೆದಾರರ ನಿರ್ಲಕ್ಷೃದಿಂದ ಕಾಮಗಾರಿ ವಿಳಂಬವಾಗಿದೆ. ಸದ್ಯ ಪೂರ್ಣಗೊಂಡಿದ್ದು, ಪ್ರಾಯೋಗಿಕ ಪರೀಕ್ಷೆ ಕೂಡ ಮಾಡಲಾಗಿದೆ. ಕೆಲ ತಾಂತ್ರಿಕ ತೊಂದರೆಗಳಿದ್ದು, ಅವುಗಳನ್ನು ಸರಿಪಡಿಸಿ ಗುತ್ತಿಗೆದಾರರು ಇಲಾಖೆಗೆ ಹಸ್ತಾಂತರಿಸಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಅನೇಕ ಬಾರಿ ಮೌಖಿಕವಾಗಿ ಹೇಳಲಾಗಿದೆ. ಅಲ್ಲದೆ, ನೋಟಿಸ್ ಕೂಡ ನೀಡಲಾಗಿದೆ. ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಈ ತಿಂಗಳಲ್ಲಿ ಕೆರೆಗಳಿಗೆ ನದಿ ನೀರು ಹರಿಸುವ ಕಾರ್ಯ ಮಾಡಲಾಗುವುದು.-ಚಂದ್ರಶೇಖರ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಹೂಳೆತ್ತಿಸಿದ್ದ ದಿಂಗಾಲೇಶ್ವರ ಸ್ವಾಮೀಜಿಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮೀಜಿ ಅವರು ನಮ್ಮೂರ ಕೆರೆಗೆ ನದಿ ನೀರು ಹರಿದು ಬರುತ್ತದೆ ಎಂಬ ಸಂತಸದಿಂದ ಸ್ವಂತ ಖರ್ಚಿನಿಂದ ಕೆರೆ ಹೂಳೆತ್ತುವ ಕಾರ್ಯ ಮಾಡಿದ್ದರು. ಯೋಜನೆ ಅನುಷ್ಠಾನಕ್ಕಾಗಿ ಅನುದಾನ ತಂದಿದ್ದ ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರೆಡ್ಡಿ ಹನುಮರೆಡ್ಡಿ ಮತ್ತು ಗ್ರಾಮಸ್ಥರ ತಂಡ ಬಾಲೇಹೊಸೂರಿನಿಂದ ಲಕ್ಷ್ಮೇಶ್ವವರೆಗೆ ಪಾದಯಾತ್ರೆ ಮಾಡಿದ್ದರು.