

ಕೇಶವಮೂರ್ತಿ ವಿ.ಬಿ. ಹಾವೇರಿ
ಮೊಬೈಲ್ ಇಂಟರ್‌ನೆಟ್, ಸಾಮಾಜಿಕ ಜಾಲತಾಣ, ಆನ್‌ಲೈನ್ ಬ್ಯಾಂಕಿಂಗ್, ಆನ್‌ಲೈನ್ ಶಾಪಿಂಗ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಇದು ಸಾರ್ವಜನಿಕರ ನಿದ್ದೆಗೆಡಿಸಿದೆ.
ಹಾವೇರಿ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆ ಆರಂಭವಾದ ಬಳಿಕ ಕಳೆದ ಆರೂವರೆ ವರ್ಷದ ಅವಧಿಯಲ್ಲಿ ಒಟ್ಟು 234 ಸೈಬರ್ ವಂಚನೆ ಪ್ರಕರಣಗಳು ವರದಿಯಾಗಿವೆ. ಕಳೆದ ಒಂದೂವರೆ ವರ್ಷದಲ್ಲೇ 139 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ 2018ರಲ್ಲಿ ಕೇವಲ 2 ಪ್ರಕರಣಗಳು ಪತ್ತೆಯಾಗಿದ್ದವು. 2019ರಲ್ಲಿ 9, 2020ರಲ್ಲಿ 25, 2021ರಲ್ಲಿ 59, 2022ರಲ್ಲಿ 104 ಹಾಗೂ 2023ರಲ್ಲಿ (ಜೂನ್‌ವರೆಗೆ) 35 ಪ್ರಕರಣಗಳು ವರದಿಯಾಗಿವೆ.
ಇತ್ತೀಚೆಗೆ ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚಾಗಿ ಇಂತಹ ವಂಚಕರ ಜಾಲಕ್ಕೆ ಸುಲಭವಾಗಿ ಬೀಳುತ್ತಿರುವುದು ಕಳವಳಕಾರಿ ಅಂಶವಾಗಿದೆ.
ಸೈಬರ್ ಅಪರಾಧದಲ್ಲಿ ಹಲವು ವಿಧಗಳಿವೆ. ಅದರಲ್ಲಿ ಒಟಿಪಿ ಪಡೆದು, ಉದ್ಯೋಗ ಕೊಡಿಸುವ ಹಾಗೂ ಉಡುಗೊರೆ ನೆಪದಲ್ಲಿ, ಲಕ್ಕಿ ಡ್ರಾ ನೆಪದಲ್ಲಿ ವಂಚಿಸುವವರ ಹಾವಳಿ ಹೆಚ್ಚಾಗಿದೆ. ವ್ಯಾಪಾರದ ನೆಪದಲ್ಲಿ, ಸಿಮ್ ಕಾರ್ಡ್, ಆಧಾರ್ ಕಾರ್ಡ್ ಕೆವೈಸಿ ಅಪ್ಡೇಟ್, ಆರ್ಮಿ, ಮ್ಯಾಟ್ರಿಮೋನಿ ಹೆಸರಲ್ಲಿ ವಂಚನೆ, ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ, ಲೋನ್ ಹೆಸರಲ್ಲಿ, ವಿಡಿಯೋ ಕರೆ ಮಾಡಿ ರೆಕಾರ್ಡ್ ಮಾಡಿಕೊಂಡು ವಂಚಿಸುವುದು ಅಲ್ಲಲ್ಲಿ ಕಂಡು ಬಂದಿದೆ.
ಹಾವೇರಿ ಸೈಬರ್ ಕ್ರೈ ವಿಭಾಗದ ಪೊಲೀಸರ ತಂಡ ಸೈಬರ್ ಅಪರಾಧಗಳ ಕುರಿತು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸೈಬರ್ ವಂಚನೆ ಆದ ನಂತರ ಆರೋಪಿಗಳನ್ನು ಪತ್ತೆ ಹಚ್ಚುವುದು ತೀರಾ ಕಷ್ಟದ ಕೆಲಸ. ಅವರ ವಿಳಾಸ ಒಂದು ರಾಜ್ಯದಲ್ಲಿ ಇದ್ದರೆ, ಅವರು ಇರುವುದು ಮತ್ಯಾವುದೋ ರಾಜ್ಯದಲ್ಲಿ. ಹಾಗಾಗಿ, ವಂಚನೆ ಆಗುವ ಮುನ್ನವೇ ಜಾಗೃತಿ ಮೂಲಕ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವುದು ಸೈಬರ್ ಕ್ರೈಂ ವಿಭಾಗದ ಪೊಲೀಸರ ಉದ್ದೇಶವಾಗಿದೆ. ಹಾಗಾಗಿ, ಶಾಲಾ- ಕಾಲೇಜು, ಸಂಘ- ಸಂಸ್ಥೆಗಳ ನೌಕರರು, ಅಧಿಕಾರಿಗಳಿಗೆ ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದಾರೆ.
ಸೈಬರ್ ವಂಚಕರ ಬಲೆಗೆ ಸಿಲುಕಿ ಹಣ ಕಳೆದುಕೊಳ್ಳುವುದಕ್ಕಿಂತ ಮುಂಚೆ ಸಾರ್ವಜನಿಕರು ಜಾಗರೂಕರಾಗಬೇಕು. ಯಾರೊಂದಿಗೂ ನಿಮ್ಮ ಒಟಿಪಿ, ಬ್ಯಾಂಕ್, ಇತರ ಮಹತ್ವದ ಮಾಹಿತಿ ಹಂಚಿಕೊಳ್ಳಬಾರದು. ಯಾವುದೇ ಅಪರಿಚಿತ ಮೊಬೈಲ್ ನಂಬರ್‌ಗಳ ಕರೆಗೆ ಸ್ಪಂದಿಸಬಾರದು. ಒಂದು ವೇಳೆ ವಂಚನೆಯಾದರೆ ಸೈಬರ್ ಕ್ರೈಂ ಠಾಣೆಗೆ ಭೇಟಿ ನೀಡಬೇಕು.ಸಂತೋಷ ಪಾಟೀಲ, ಪೊಲೀಸ್ ಇನ್ಸ್‌ಪೆಕ್ಟರ್, ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆ