

ಕಡೂರು: ಒಂಭತ್ತು ವರ್ಷಕ್ಕೊಮ್ಮೆ ನಡೆಯುತ್ತಿರುವ ಯಗಟಿಪುರದ ಶ್ರೀಮಲ್ಲಿಕಾರ್ಜುನ ಸ್ವಾಮಿಯ ಬಾಯಿಬೀಗ ಬಂಡಿ ಜಂಪಮಹೋತ್ಸವದ ಅಂಗವಾಗಿ ಮಂಗಳವಾರ ಸಿಗೇಹಡ್ಲು ಗ್ರಾಮದಲ್ಲಿ ಸಾಂಪ್ರದಾಯಿಕವಾದ ಮೂರನೇ ಬಂಡಿಯ ಭಕ್ತರು ಮೆರವಣಿಗೆಯ ಮೂಲಕ ಜಾತ್ರಾಮಹೋತ್ಸವದಲ್ಲಿ ಭಾಗಿಯಾದರು.
ಬೆಳಗ್ಗೆ ಗ್ರಾಮ ದೇವತೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನಡೆಸಿ ಅಲಂಕೃತಗೊಳಿಸಿದ್ದ ಗೊಬ್ಬರದ ಬಂಡಿಗೆ ಧಾರ್ಮಿಕವಾಗಿ ಪೂಜೆ ಸಲ್ಲಿಸಲಾಯಿತು. ಶಿವಲಿಂಗದ ಜತೆ ನಂದಿಯ ಆಕೃತಿಯೊಂದಿಗೆ ಸಿಂಗಾರಗೊಳಿಸಿದ್ದ ಮೀಸಲು ಜತೆ ಗೊಬ್ಬರ ತುಂಬಿದ್ದ ಎತ್ತಿನಗಾಡಿಯು ಎಲ್ಲರ ಗಮನಸೆಳೆಯಿತು. ನಂತರ ಸಾಂಪ್ರದಾಯಿಕವಾಗಿ ಗ್ರಾಮದ ಹೆಬ್ಬಾಗಿಲು ಮೂಲಕ ಭಕ್ತರು ಜಯ ಘೋಷಗಳೊಂದಿಗೆ ಪುರದವರೆಗೆ ಮೆರವಣಿಗೆ ಸಾಗಿದರು. ಮೈಲಿ ಉದ್ದದ ಸಾಲಿನ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಹಾಗೂ ಆಕರ್ಷಕ ಡಿಜೆಗೆ ಯುವಕರು ಕುಣಿದು ಕುಪ್ಪಳಿಸಿದರು.
ಎತ್ತಿನ ಬಂಡಿಯ ಜತೆ ಇತರೆ ಗ್ರಾಮದ ನೂರಾರು ಬಂಡಿಗಳುಸಿಗೇಹಡ್ಲು ಗ್ರಾಮದಿಂದ ಕಾಮನಕೆರೆ, ದಾಸರಹಳ್ಳಿ, ಬಿಸಲೆರೆ, ಅರೇಹಳ್ಳಿ, ಮಾವಿನಹಳ್ಳಿ ಮಾರ್ಗವಾಗಿ ಪಿ.ಕೋಡಿಹಳ್ಳಿಯವರೆಗೆ ತಲುಪಿ ಒಂದು ಮತ್ತು ಎರಡನೇ ಬಂಡಿಯ ಮೂಲ್ವಿಕರೊಂದಿಗೆ ಜತೆಗೂಡಿದರು. ಸಂಜೆ ಪಿ.ಕೋಡಿಹಳ್ಳಿಯ ಗ್ರಾಮದಲ್ಲಿರುವ ಮೂಲ್ವಿಕ ಭಕ್ತರಿಂದ ಸಂಪ್ರಾದಾಯಿಕವಾಗಿ ಉಪವಾಸ ವೃತದಲ್ಲಿದ್ದ ಹೆಣ್ಣುಮಕ್ಕಳಿಗೆ ಬಾಯಿಬೀಗ ಅರ್ಪಿಸಿ ಧಾರ್ಮಿಕ ಸಂಪ್ರಾದಾಯದೊಂದಿಗೆ ಗ್ರಾಮದಿಂದ ಪುರದವರೆಗೆ ಗ್ರಾಮದೇವತೆಗಳ ಉತ್ಸವದೊಂದಿಗೆ ವಿಜೃಂಭಣೆಯ ಮೆರವಣೆಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಾಗುವ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಣೆ ಹಾಗೂ ಪಿ.ಕೋಡಿಹಳ್ಳಿ ಗ್ರಾಮದಲ್ಲಿ ಬರುವ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.