

ಹಾಸನ: ಎಟಿಎಂ ಯಂತ್ರವನ್ನು ಒಡೆದು ಕಳ್ಳತನ ಮಾಡಿರುವ ಹಲವು ಪ್ರಕರಣಗಳು ನಡೆದಿವೆ. ಆದರೆ ಇಲ್ಲೊಂದು ಖದೀಮರ ತಂಡ ಮುಖ್ಯ ರಸ್ತೆ ಬಳಿ ಇದ್ದ ಎಟಿಎಂ ಮಿಷನ್‌ನನ್ನೇ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಗೊರೂರು ಮುಖ್ಯ ರಸ್ತೆ, ಹನುಮಂತಪುರ, ಪಂಚಮುಖಿ ಬೃಹತ್ ಆಂಜನೇಯ ವಿಗ್ರಹದ ಸಮೀಪದಲ್ಲೇ ಇರುವ ಇಂಡಿಯಾ ಒನ್ ಎಟಿಎಂ ಮಿಷನ್‌ನನ್ನೇ ತಡರಾತ್ರಿ ಒಂದು ಗಂಟೆಯ ಆಸುಪಾಸಿನಲ್ಲಿ ಎಗರಿಸಿಕೊಂಡು ಹೋಗಿದ್ದಾರೆ.
ಕಳ್ಳರು ಕದಿಯುವಾಗ ಯಾರು ನೋಡಬಾರದೆಂದು ಮೊದಲೆ ಪ್ಲಾನ್ ಮಾಡಿಕೊಂಡು ಎಟಿಎಂ ಅಕ್ಕ-ಪಕ್ಕದಲ್ಲಿರುವ ಮನೆಗಳ ಮುಂದಿನ ಬಾಗಿಲಿನ ಚಿಲಕಕ್ಕೆ ಕಡ್ಡಿ ಸಿಕ್ಕಿಸಿದ್ದಾರೆ. ನಂತರ ಎಟಿಎಂ ಬೂತ್‌ಗೆ ನುಗ್ಗಿದ್ದಾರೆ. ಹಣ ತೆಗೆಯಲು ಹೋದರೆ ಸೈರನ್ ಇತರೆ ಸಮಸ್ಯೆಗಳು ಎದುರಾಗಬಹುದೆಂದು ಸೈರನ್ ಬಾರದಂತೆ ನಿಗಾ ವಹಿಸಿದ್ದು, ನಂತರ ಹಣದ ಸಮೇತ ಎಟಿಎಂ ಯಂತ್ರವನ್ನೇ ಆರೆ ಸಹಾಯದೊಂದಿಗೆ ಕದ್ದೊಯ್ದಿದ್ದಾರೆ.
ಬೆಳಗಿನ ಸಮಯದಲ್ಲಿ ಜನರಿಗೆ ಎಟಿಎಂ ಕಳ್ಳತನ ಆಗಿರುವ ಬಗ್ಗೆ ತಿಳಿದು ಬಂದಿದೆ. ನಂತರ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಬುಧವಾರ ಬೆಳಿಗ್ಗೆ ಎಸ್ಪಿ ಮೊಹಮ್ಮದ್ ಸುಜೀತಾ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೆ ವೇಳೆ ಹನುಮಂತಪುರ ಗ್ರಾಮದ ಮುರಳೀಧರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳವಾರ ಸಂಜೆಯಿಂದ ರಾತ್ರಿ 10.30ರವರೆಗೂ ಇಲ್ಲೆ ತಿರುಗಾಡಿದ್ದೇವೆ. ಯಾರು ಈ ಕಳ್ಳತನ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ರಾತ್ರಿ ವೇಳೆ ಲಾರಿ ಹಾಗೂ ಇತರೆ ವಾಹನಗಳು ಓಡಾಡುತ್ತಿರುತ್ತದೆ. 11 ಗಂಟೆಯ ನಂತರ ವಾಹನ ಸಂಚಾರ ಕಡಿಮೆ ಆಗುತ್ತದೆ. ಈ ವೇಳೆ ಕಳ್ಳತನ ಮಾಡಿರಬಹುದು ಎಂದು ತಿಳಿಸಿದರು.
ಗ್ರಾಮಸ್ಥರಾದ ರಾಮಣ್ಣ ಮಾತನಾಡಿ, ಹನುಮಂತಪುರದಲ್ಲಿರುವ ಹಿಮಾಂತ್ ಸಿಂಗ್ ಬಿಸ್ವಾಸ್ ಕಾರ್ಖಾನೆಯಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಾರೆ. ಇಲ್ಲಿ ಹೆಚ್ಚಿನ ಪೊಲೀಸ್ ಸೆಕ್ಯೂರಿಟಿ ಅಗತ್ಯವಿದೆ. ಬೀಟ್ ಬಂದು ಹೋದರೆ ಪ್ರಯೋಜನವಿಲ್ಲ. ಪೊಲೀಸ್ ಇಲಾಖೆ ಈ ಬಗ್ಗೆ ಗಮನ ವಹಿಸಬೇಕು. ನಮ್ಮ ವೃತ್ತಕ್ಕೆ ಒಂದು ಪೊಲೀಸ್ ಠಾಣೆ ಅಗತ್ಯವಿದೆ ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಮನವಿ ಮಾಡಿದರು.