

ಮಂಡ್ಯ: ಇಲ್ಲಿನ ನಗರಸಭೆ ಸಮೀಪ ಕಳ್ಳರು ಸೋಮವಾರ ಕಾರಿನ ಗಾಜು ಹೊಡೆದು ಒಳಗಿದ್ದ ಲಕ್ಷಾಂತರ ರೂ ದೋಚಿದ್ದಾರೆ.
ಪಾಂಡವಪುರ ತಾಲೂಕು ಚಿನಕುರಳಿ ಗ್ರಾಮದ ಪರಮೇಶ್ ಎಂಬುವರೇ ಹಣ ಕಳೆದುಕೊಂಡವರು. ವೈಯಕ್ತಿಕ ಕಾರಣಕ್ಕೆ ಜಮೀನು ಮಾರಾಟ ಮಾಡಿ ಮಂಡ್ಯದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಅದರಿಂದ ಬಂದ ಹಣವನ್ನು ಕಾರಿನಲ್ಲಿಟ್ಟುಕೊಂಡು ನಗರಸಭೆ ಆವರಣಕ್ಕೆ ಬಂದಿದ್ದರು. ನಗರಸಭೆಯಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಹೋಗುವ ಮುನ್ನ ಕಾರ್ಯ ನಿಮಿತ್ತ ಸಮೀಪದಲ್ಲಿದ್ದ ಎಸ್‌ಬಿಐಗೆ ಹೋಗಿದ್ದಾರೆ. ಆದರೆ ಬರುವಷ್ಟರೊಳಗೆ
ದುಷ್ಕರ್ಮಿಗಳು ಕಾರಿನ ಗಾಜನ್ನು ಹೊಡೆದ 4.5 ಲಕ್ಷ ರೂ ಕದ್ದು ಪರಾರಿಯಾಗಿದ್ದಾರೆ.ಪರಮೇಶ್ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ನಗರಸಭೆ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ವೀಕ್ಷಿಸಿದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಹಣ ಕದ್ದು ಪರಾರಿಯಾಗಿರುವುದು ಗೊತ್ತಾಗಿದೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಉಪ ನೋಂದಣಿ ಕಚೇರಿ ಸೇರಿದಂತೆ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.