

ಕೋಟ: ಕರಾವಳಿಯ ಜಾನಪದದ ಸೊಗಡಿಗೆ ಸರಿಸಾಟಿಯೇ ಇಲ್ಲ, ಇಲ್ಲಿನ ಜಾನಪದ ಬದುಕಿನ ಪರಿಭಾಷೆ ವಿಶಿಷ್ಟವಾದದ್ದು ಎಂದು ಉದ್ಯಮಿ ಆನಂದ್ ಸಿ.ಕುಂದರ್ ಅಭಿಪ್ರಾಯಪಟ್ಟರು.
ಬುಧವಾರ ಕೋಟದ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಹಬ್ಬ- 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಾನಪದಲ್ಲಿ ವಿವಿಧ ತರಹದ ಬದುಕಿನ ಚಹರೆಗಳಿವೆ ಇವುಗಳನ್ನು ಮುಂದಿನ ತಲೆಮಾರಿಗೆ ಕೊಂಡ್ಯೊಯಬೇಕು, ಅಂದಿನ ಗತವೈಭವ ಮತ್ತೆ ಮರುಕಳಿಸಬೇಕಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಕ್ಷೇತ್ರದ ಕೋಟತಟ್ಟು ಶಾಂತಾ ಐತಾಳ್ ಅವರನ್ನು ಗೌರವಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಉಪನ್ಯಾಸಕರಾದ ರಮೇಶ್ ಆಚಾರ್, ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಶಂಕರ್ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಭೂಮಿಕಾ ನಿರೂಪಿಸಿ, ವಂದಿಸಿದರು.
ಜಾನಪದ ಹಬ್ಬದ ಅಂಗವಾಗಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜಿಸಲಾಗಿತ್ತು. ಗಣ್ಯರಿಗೆ ಕಾಲು ತೊಳೆಯಲು ನೀರು ನೀಡಿ ಆಹ್ವಾನಿಸಲಾಯಿತು. ಒಳ ಪ್ರವೇಶಿಸುತ್ತಿದಂತೆ ಬೆಲ್ಲ ನೀರು ಕೊಟ್ಟು ಸಭಾಂಗಣದ ಒಳಗೆ ಸ್ವಾಗತಿಸಲಾಯಿತು. ನಂತರ ಕಾಲೇಜಿನ ಒಳ ಸಭಾಂಗಣದಲ್ಲಿ ಜಾನಪದ ಪರಿಕರಗಳ ಪ್ರದರ್ಶನ ಏರ್ಪಡಿಸಿದ್ದು, ವಿದ್ಯಾರ್ಥಿಗಳು ತೆಂಗಿನ ಗರಿಯಲ್ಲಿ ಚಪ್ಪರ ನಿರ್ಮಾಣ, ರಂಗೋಲಿ ಬಿಡಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಸಭಾ ಕಾರ್ಯಕ್ರಮದಲ್ಲಿ ಅಡಕೆ ಹಾಳೆ ತೊಡಿಸಿ, ವೀಳ್ಯದೆಲೆ, ಅಡಕೆ ನೀಡಿ ಸ್ವಾಗತಿಸಲಾಯಿತು. ಅಡಕೆ ಸಿಂಗಾರವನ್ನು ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.