

ಬೈಲಹೊಂಗಲ: ಸಾಕಿ, ಸಲುಹಿದ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿರುವ ಪ್ರವೃತ್ತಿ ಸಮಾಜಕ್ಕೆ ಮಾರಕವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಬೇಸರ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರ ದಿನಾಚಾರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ಶುಕ್ರವಾರ ನಗರದ ಇಂದಿರಾ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿ.ಟಿ. ವದ್ದಾಶ್ರಮಕ್ಕೆ ಭೇಟಿ ನೀಡಿ ಹಣ್ಣು ವಿತರಿಸಿ ಮಾತನಾಡಿದರು. ಕಾನೂನು ಸಹಾಯ ಬೇಕಾದಲ್ಲಿ ಸಂಪರ್ಕಿಸುವಂತೆ ತಿಳಿಸಿದರು. ಇಳಿವಯಸ್ಸಿನಲ್ಲಿ ಮಕ್ಕಳು ನಮ್ಮನ್ನು ಪೋಷಿಸಬೇಕೆಂಬ ಅಭಿಲಾಷೆಯಿಂದ ಮಕ್ಕಳನ್ನು ಬೆಳೆಸಿರುತ್ತಾರೆ. ಅವರಿಗೆ ನೋವುಂಟು ಮಾಡುವುದು ಸರಿಯಲ್ಲ. ಅವರ ಆರೈಕೆ ಮತ್ತು ಗೌರವ ನಮ್ಮ ಕರ್ತವ್ಯ ಎಂದರು.
ಪ್ರಧಾನ ದಿವಾಣಿ ನ್ಯಾಯಾಧೀಶ ರೋಹಿಣಿ ಬಸ್ಸಾಪುರ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ ನಾಯಕ ಮಾತನಾಡಿ, ಹಿರಿಯರಿಗೆ ಗೌರವ ಕೊಡುವ ದೇಶ ಭಾರತವೆಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಅವರ ಸಮಸ್ಯೆ ಅರಿತು ಸಾಂತ್ವನ ಒದಗಿಸುವಂತಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಉಪಾಧ್ಯಕ್ಷ ಎ.ಎಂ.ಸಿದ್ರಾಮನಿ, ಸರ್ಕಾರಿ ಅಭಿಯೋಜಕ ರಮೇಶ ಕೋಲಕಾರ, ತಾಲೂಕು ಕಾನೂನು ಸೇವಾ ಸಮಿತಿಯ ಸಂಚಾಲಕ ಉಮೇಶಕುಮಾರ ಕಾರಜೋಳ, ಕುಮಾರ ಬಾರಿಮರದ, ವಕೀಲರ ಎಸ್.ಜಿ. ಬೂದಯ್ಯನವರಮಠ ಇತರರಿದ್ದರು.