ರೈಲ್ವೆ ಗೋದಾಮಿನಿಂದ ತಂತಿ ಕದ್ದು ಸಾಗಿಸುತ್ತಿದ್ದಾಗ ಟೆಂಪೋ ಪಲ್ಟಿ

Crime
Published on

ಉಳ್ಳಾಲ: ಗುರುವಾರ ಮುಸುಕಿನ ವೇಳೆ ರೈಲ್ವೆ ಇಲಾಖೆ ಗೋದಾಮಿನಿಂದ ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ತಂತಿ ಕದ್ದು ಸಾಗಿಸುತ್ತಿದ್ದ ಟೆಂಪೋ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಉರುಳಿ ಬಿದ್ದು ನಾಲ್ವರು ಗಾಯಗೊಂಡಿದ್ದಾರೆ.


ಕಾಮಗಾರಿ ಹಿನ್ನೆಲೆಯಲ್ಲಿ ಸೋಮೇಶ್ವರ ರೈಲ್ವೆ ಗೋದಾಮಿನಲ್ಲಿಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ತಂತಿಗಳನ್ನು ಆರೋಪಿಗಳು ಕಳವು ಮಾಡಿ, ಟೆಂಪೋದಲ್ಲಿ ತುಂಬಿಸಿ ಮಂಗಳೂರಿನತ್ತ ಸಾಗಿಸುತ್ತಿದ್ದರು. ತೊಕ್ಕೊಟ್ಟು ಓವರ್ ಬ್ರಿಡ್ಜ್ ಆಗಿ ಒಳಪೇಟೆ ಸಂಪರ್ಕಿಸುವ ಇಳಿಜಾರು ರಸ್ತೆಗೆ ತಲುಪಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಟೆಂಪೊ ಉರುಳಿ ಬಿದ್ದಿದೆ.

ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಟೆಂಪೋದಲ್ಲಿದ್ದ ಇಬ್ಬರು ಮಹಿಳೆಯರ ಸಹಿತ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದು, ವಿಚಾರಣೆ ನಡೆಸಿದ ಉಳ್ಳಾಲ ಪೊಲೀಸರು ಬಳಿಕ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇವರು ತಮಿಳುನಾಡು ಮೂಲದವರಾಗಿದ್ದು ಪ್ರಸಕ್ತ ಮಂಗಳೂರಿನ ಸೂಟರ್‌ಪೇಟೆಯಲ್ಲಿ ವಾಸವಿದ್ದಾರೆ. ಬಂಧಿತರನ್ನು ವೆಂಕಟೇಶ್, ಹೊಯ್ಗೆ ಬಜಾರಿನ ಜಯಲಕ್ಷ್ಮಿ, ನಂದಿನಿ ಹಾಗೂ ಮೂಲ್ಕಿಯ ರಾಜ್‌ಕುಮಾರ್ ಎಂದು ಗುರುತಿಸಲಾಗಿದೆ. ಕಳ್ಳತನ ಮಾಡಿದ್ದ ವಿದ್ಯುತ್ ತಂತಿಯ ಮೌಲ್ಯ 3.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗಾಯಾಳು ಆರೋಪಿಗಳನ್ನ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net